ರಾಜಕೀಯ ಪಕ್ಷಗಳಿಗೆ ಮತ್ತು ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್, ಗುಲಾಂ ಮುಸ್ತಫಾ ಜಾಟೋಯಿ, ಝಫರುಲ್ಲಾ ಜಮಾಲಿ ಮತ್ತು ಮೊಹಮದ್ ಖಾನ್ ಜುನೆಜೊ ಸೇರಿ ವಿವಿಧ ನಾಯಕರಿಗೆ ಭಾರೀ ಮೊತ್ತದ ಹಣವನ್ನು ವಿತರಿಸಿದ್ದಾಗಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಚಕಿತಕಾರಿ ಹೇಳಿಕೆಯಲ್ಲಿ ಬಹಿರಂಗ ಮಾಡಿದೆ.
ಪಾಕಿಸ್ತಾನದ ಮಾಜಿ ಮುಖ್ಯನ್ಯಾಯಮೂರ್ತಿ ಸಯೀದುಝ್ ಜಮಾನ್ ಸಿದ್ದಿಖಿ ಈ ವಿಷಯವನ್ನು ಬಹಿರಂಗಪಡಿಸಿದ್ದು, 1999ರಿಂದ ಸುಪ್ರೀಂಕೋರ್ಟ್‌ನಲ್ಲಿ ಈ ಪ್ರಕರಣ ಬಾಕಿವುಳಿದಿದೆ.
ಐಎಸ್‌ಐ ಮಾಜಿ ಮುಖ್ಯಸ್ಥ ಲೆ.ಜನರಲ್(ನಿವೃತ್ತ) ಅಸಾದ್ ದುರಾನಿ ಕೋರ್ಟ್‌ಗೆ ಸಲ್ಲಿಸಿದ ಅಫಿಡಾವಿಡ್‌ನಲ್ಲಿ ಚಕಿತಕಾರಿ ಬಹಿರಂಗ ಮಾಡಿದ್ದಾರೆ. ಮಿಲಿಯನ್‌ಗಟ್ಟಲೆ ಹಣವನ್ನು ಮಾಜಿ ಅಧ್ಯಕ್ಷ ಗುಲಾಂ ಇಶಾಖ್ ಖಾನ್ ಆಡಳಿತದಲ್ಲಿ ವಿತರಿಸಲಾಗಿತ್ತು ಎಂದು ಸಿದ್ಧಿಖಿ ಖಾಸಗಿ ಟಿವಿ ಚಾನೆಲ್‌ಗೆ ತಿಳಿಸಿದ್ದಾಗಿ ಡೇಲಿ ಟೈಮ್ಸ್ ವರದಿ ಮಾಡಿದೆ. ಆಗಿನ ಇಸ್ಲಾಮಿ ಜಮಾಹೂರಿ ಇತ್ತೆಹಾದ್‌ಗೆ ಸೇರಲು ರಾಜಕೀಯ ನಾಯಕರಿಗೆ ಮನದಟ್ಟು ಮಾಡುವುದು ಹಣ ವಿತರಣೆಯ ಉದ್ದೇಶವಾಗಿತ್ತು.
ಗುಲಾಂ ಮುಸ್ತಾಫಾ ಜಾಟೊಯಿ ನೇತೃತ್ವದ ಇತ್ತೆಹಾದ್‌ನ್ನು ಸೆ.1988ರಲ್ಲಿ ಚುನಾವಣೆಯಲ್ಲಿ ಪಾಕಿಸ್ತಾನ ಪೀಪಲ್ಸ್ ಪಕ್ಷಕ್ಕೆ ವಿರೋಧಿಯಾಗಿ ಸ್ಥಾಪಿಸಲಾಯಿತು. ಮುಸ್ಲಿಂ ಲೀಗ್, ನ್ಯಾಷನಲ್ ಪೀಪಲ್ಸ್ ಪಕ್ಷ, ಜಮಾತೆ ಇಸ್ಲಾಮಿ ಮತ್ತು ಜಮೈತ್ ಉಲೇಮಾ ಇಸ್ಲಾಂ ಮುಂತಾದ ಭಾಗಗಳೊಂದಿಗೆ ಮೈತ್ರಿಕೂಟವು 9 ಪಕ್ಷಗಳ ಸಂಯೋಗವಾಗಿತ್ತು. ಲೆ.ಜನರಲ್(ನಿವೃತ್ತ) ದುರಾನಿ 1994 ಜು.24ರಂದು ಲಿಖಿತ ಅಫಿಡಾವಿಟ್ ಸಲ್ಲಿಸಿ, ಹಣವಿತರಣೆಗೆ ಸರ್ಕಾರದ ಸಂಪೂರ್ಣ ಅನುಮತಿಯಿದೆಯೆಂದು ತಿಳಿಸಿದ್ದಾಗಿ ಸಿದ್ಧಿಖಿ ಚಾನೆಲ್‌ಗೆ ಹೇಳಿದ್ದಾರೆ.
ಮಾಜಿ ಪ್ರಧಾನಮಂತ್ರಿ ಗುಲಾಂ ಮುಸ್ತಾಫಾ ಜಾಟೋಯಿ 50 ಲಕ್ಷ ರೂ. ನವಾಜ್ ಷರೀಫ್ 35 ಲಕ್ಷ ರೂ., ಝಫರುಲ್ಲಾ ಜಮಾಲಿ 40 ಲಕ್ಷ ರೂ. ಮತ್ತು ಮುಹಮದ್ ಖಾನ್ ಜುನೇಜೊ 25 ಲಕ್ಷ ರೂ ಮತ್ತು ಸಿಂಧ್ ಮಾಜಿ ಮುಖ್ಯಮಂತ್ರಿ ಜಾಮ್ ಸಾದಿಖ್ 50 ಲಕ್ಷ ರೂ. ಸ್ವೀಕರಿಸಿದ್ದಾರೆಂದು ಅಫಿಡಾವಿಟ್‌ನಲ್ಲಿ ತಿಳಿಸಲಾಗಿದೆ.