ಇಸ್ಲಾಮಾಬಾದ್, ಶುಕ್ರವಾರ, 28 ಆಗಸ್ಟ್ 2009( 11:45 IST )
ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಆಫ್ಘನ್ ಗಡಿ ಬಳಿಯ ತಪಾಸಣೆಚೌಕಿಯೊಂದಕ್ಕೆ ಆತ್ಮಾಹುತಿ ಬಾಂಬರ್ ದಾಳಿ ಮಾಡಿದ್ದರಿಂದ ಬಹುತೇಕ ಭದ್ರತಾ ಸಿಬ್ಬಂದಿಯಿಂದ ಕೂಡಿದ 22 ಜನರು ಹತರಾಗಿದ್ದಾರೆ. ಈ ಪ್ರದೇಶದ ಇತರ ಕಡೆ ಡ್ರೋನ್ ದಾಳಿ ಮತ್ತು ಗುಂಡಿನ ಚಕಮಕಿಗಳಲ್ಲಿ 23 ಜನರು ಸತ್ತಿದ್ದು, ಸತ್ತವರಲ್ಲಿ ಬಹುತೇಕ ಮಂದಿ ಉಗ್ರಗಾಮಿಗಳಾಗಿದ್ದಾರೆ.
ಇಫ್ತಾರ್ ಕೂಟ ನಡೆಯುವ ಸಂದರ್ಭದಲ್ಲೇ ಯುವ ಆತ್ಮಾಹುತಿ ಬಾಂಬರ್ ಬುಡಕಟ್ಟು ಸೇನೆಯಾದ ಖಾಸದಾರ್ ಪಡೆ ಕಾವಲಿರಿಸಿದ್ದ ಖೈಬರ್ ಪ್ರದೇಶದ ಚೆಕ್‌ಪೋಸ್ಟ್ ಮೇಲೆ ದಾಳಿ ಮಾಡಿದ. ಈ ದಾಳಿಯಲ್ಲಿ 22 ಜನರು ಅಸುನೀಗಿದ್ದು, ಇನ್ನೂ 27 ಮಂದಿ ಗಾಯಗೊಂಡಿದ್ದಾರೆ. ತೆಹ್ರಿಕೆ ತಾಲಿಬಾನ್ ಗುಂಪಿನ ಜತೆ ನಂಟು ಹೊಂದಿರುವ ಅಬ್ದುಲ್ಲಾ ಅಜಂ ಶಹೀದ್ ಬ್ರಿಗೇಡ್ ದಾಳಿಗೆ ಹೊಣೆ ಹೊತ್ತಿದೆ.
ಪೇಶಾವರದಲ್ಲಿ ಕಳೆದ ಜೂನ್‌ನಲ್ಲಿ ಪರ್ಲ್ ಕಾಂಟಿನೆಂಟಲ್ ಐಷಾರಾಮಿ ಹೊಟೆಲ್‌ನಲ್ಲಿ ಆತ್ಮಾಹುತಿ ಕಾರ್ ಬಾಂಬ್ ದಾಳಿಗೆ ಸಂಬಂಧಪಟ್ಟಂತೆ ಗುಂಪು ಜವಾಬ್ದಾರಿ ಹೊತ್ತಿದೆ. ತಾಲಿಬಾನ್ ಹೊಸ ಮುಖಂಡನನ್ನು ಆಯ್ಕೆ ಮಾಡಿದ ಎರಡು ದಿನಗಳ ಬಳಿಕ, ಅಮೆರಿಕದ ಡ್ರೋನ್ ವಿಮಾನವೊಂದು ಪ್ರಮುಖ ಉಗ್ರಗಾಮಿ ಕಮಾಂಡರ್ ವಾಲಿ ಉರ್ ರೆಹ್ಮಾನ್ ಅವರ ದಕ್ಷಿಣ ವಾಜಿರಿಸ್ತಾನದ ಭದ್ರಕೋಟೆ ಮೇಲೆ ಕ್ಷಿಪಣಿಗಳ ದಾಳಿ ಮಾಡಿದೆ. ಬಹುತೇಕ ಉಗ್ರರಿಂದ ಕೂಡಿದ 8 ಜನರು ಹತರಾಗಿದ್ದು, ಇನ್ನೂ 9 ಮಂದಿ ಗಾಯಗೊಂಡಿದ್ದಾರೆ.