'ಮಾಹಿತಿ ಹಂಚಿಕೊಂಡಿದ್ದರೆ ಮುಂಬೈ ದಾಳಿ ತಪ್ಪಿಸಬಹುದಿತ್ತು'
ಇಸ್ಲಾಮಾಬಾದ್, ಶುಕ್ರವಾರ, 28 ಆಗಸ್ಟ್ 2009( 11:48 IST )
ಪಾಕಿಸ್ತಾನದ ಜತೆ ಪೂರ್ವಭಾವಿಯಾಗಿ ಗುಪ್ತಚರ ಮಾಹಿತಿಗಳನ್ನು ಹಂಚಿಕೊಂಡಿದ್ದರೆ ನವೆಂಬರ್ 26ರ ಮುಂಬೈ ದಾಳಿಗಳನ್ನು ಭಾರತ ತಪ್ಪಿಸಬಹುದಾಗಿತ್ತು ಎಂದು ಪಾಕಿಸ್ತಾನ ಸರ್ಕಾರ ಆಘಾತಕಾರಿ ಹೇಳಿಕೆ ನೀಡಿದೆ. ಒಳಾಡಳಿತ ವ್ಯವಹಾರಗಳನ್ನು ಕುರಿತ ಪ್ರಧಾನಮಂತ್ರಿ ಸಲಹೆಗಾರರಾಗಿರುವ ರೆಹ್ಮಾನ್ ಮಲಿಕ್ ಈ ಕುರಿತು ತಿಳಿಸಿದ್ದು, ಭಾರತ ಮುಂಚಿತವಾಗಿ ಎಲ್ಲ ಗುಪ್ತಚರ ಮಾಹಿತಿಗಳನ್ನು ನಮಗೆ ನೀಡಿದ್ದರೆ ನಾವು ಸೂಕ್ತ ಕ್ರಮ ಕೈಗೊಂಡು ಭಯೋತ್ಪಾದನೆ ದಾಳಿಗಳನ್ನು ತಪ್ಪಿಸಬಹುದಿತ್ತು ಎಂದು ಹೇಳಿದ್ದಾರೆ.
ಪಾಕಿಸ್ತಾನದ ಕೋರ್ಟ್‌ಗೆ ದೃಢಪಡುವಂತ ಸಾಕ್ಷ್ಯಾಧಾರವನ್ನು ಭಾರತ ನೀಡಿದ್ದರೆ ಮಾತ್ರ ಹಫೀಜ್ ಸಯೀದ್ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿತ್ತು ಎಂದು ಕೂಡ ಮಲಿಕ್ ತಿಳಿಸಿದ್ದಾರೆ. ಭಾರತ ಒದಗಿಸಿದ ಸಾಕ್ಷ್ಯಾಧಾರದ ಆಧಾರದ ಮೇಲೆ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ನೀಡಿದ್ದರಿಂದ ಸಾಕ್ಷ್ಯಾಧಾರವನ್ನು ಪಾಕಿಸ್ತಾನ ಪರಿಶೀಲಿಸುವ ಅಗತ್ಯವಿದೆಯೆಂದು ಅವರು ಹೇಳಿದರು.
ಲಂಡನ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ನಾವು ರೆಡ್ ಕಾರ್ನರ್ ನೋಟಿಸ್ ಕುರಿತು ಪರಿಶೀಲನೆ ನಡೆಸುತ್ತೇವೆ. ನೋಟಿಸ್ ಆಧಾರದ ಮೇಲೆ ಕ್ರಮಕ್ಕೆ ಕೆಲವು ವಿಧಿವಿಧಾನಗಳು ಅಗತ್ಯವಾಗಿದೆ ಎಂದು ಮಲಿಕ್ ಹೇಳಿದ್ದಾರೆ. ಮುಂಬೈ ದಾಳಿಗಳನ್ನು ಯೋಜಿಸಿ ಕಾರ್ಯಗತಗೊಳಿಸಿದ ಆರೋಪ ಹೊತ್ತಿರುವ ಜೆಯುಡಿ ಮುಖ್ಯಸ್ಥನ ಮೇಲೆ ಮುಂಬೈ ವಿಶೇಷ ಕೋರ್ಟ್ ಜಾಮೀನುರಹಿತ ಬಂಧನದ ವಾರಂಟ್ ಜಾರಿ ಮಾಡಿದ ಬಳಿಕ ಸಯೀದ್ ವಿರುದ್ಧ ಇಟಂರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ.