ಆಫ್ಘನ್ನರು ತುರುಸಿನ ಸ್ಪರ್ಧೆಯಿದ್ದ ಚುನಾವಣೆ ಫಲಿತಾಂಶವನ್ನು ಕಾಯುತ್ತಿರುವ ನಡುವೆ, ತಮ್ಮ ಮುಂದಿನ ಅಧ್ಯಕ್ಷರು ಯಾರೆಂಬ ಬಗ್ಗೆ ಮತ್ತು ಅವರಿಗೆ ಸಿಗುವ ಜನಾದೇಶ ಎಷ್ಟು ದೃಢ ಎನ್ನುವ ಜಟಿಲ ಊಹಾತ್ಮಕ ಆಟದಲ್ಲಿ ದೇಶ ಮುಳುಗಿದೆ.
ಉನ್ನತ ಹುದ್ದೆಯ ಸ್ಪರ್ಧೆಗೆ ಎಣಿಕೆ ಮುಂದುವರಿದಿದ್ದು,ಮುಖ್ಯ ಎದುರಾಳಿಗಳಾದ ಅಧ್ಯಕ್ಷ ಹಮೀದ್ ಕರ್ಜೈ ಮತ್ತು ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಅಬ್ದುಲ್ಲಾ ನಡುವಿನ ಅಂತರವು ಹಾಲಿ ಅಧ್ಯಕ್ಷರ ಪರವಾಗಿ ಹೆಚ್ಚಾಗಿದೆ. ಶೇ.17ಕ್ಕೆ ಹೆಚ್ಚು ಅಂದರೆ 10 ಲಕ್ಷ ಮತಪತ್ರಗಳ ಎಣಿಕೆ ಮುಗಿದಿದ್ದು, ಪಾಶ್ಚಿಮಾತ್ಯ ಬೆಂಬಲಿತ ಕರ್ಜೈ ಶೇ.42.3 ಮತ್ತು ಅಬ್ದುಲ್ಲಾ ಶೇ.33.1 ಮತಗಳನ್ನು ಗಳಿಸಿದ್ದನ್ನು ಬಹಿರಂಗಗೊಳಿಸಲಾಗಿದೆ.
ಎಣಿಕೆಯ ಉಸ್ತುವಾರಿ ವಹಿಸಿರುವ ಚುನಾವಣೆ ಆಯೋಗ ಶನಿವಾರದವರೆಗೆ ನಾವು ಯಾವುದೇ ಅಂಕಿಅಂಶ ಬಿಡುಗಡೆ ಮಾಡುವುದಿಲ್ಲವೆಂದು ಹೇಳಿದೆ. ಮತಎಣಿಕೆ ಮುಂದುವರಿಯಲಿದೆಯೆಂದು ಐಇಸಿ ವಕ್ತಾರೆ ಮಾರ್ಜಿಯಾ ಸಿದ್ಧಿಖಿ ತಿಳಿಸಿದ್ದು, ಇಂದಿನ ಫಲಿತಾಂಶ ಬಿಡುಗಡೆ ಮಾಡದಿರುವ ಕಾರಣಗಳನ್ನು ಹೇಳಿಲ್ಲ.