44 ವರ್ಷ ವಯಸ್ಸಿನ ರಿಚರ್ಡ್ ರಿಂಗೋಲ್ಡ್ ಎಂಬ ವ್ಯಕ್ತಿ ಇಬ್ಬರು ಮಹಿಳೆಯರು, ಒಬ್ಬ ಪುರುಷ ಮತ್ತು 11ರ ಪ್ರಾಯದ ಬಾಲಕಿಗೆ ಗುಂಡಿಕ್ಕಿ ಹತ್ಯೆಮಾಡಿದ್ದಲ್ಲದೇ 4 ವರ್ಷ ವಯಸ್ಸಿನ ಮಗುವನ್ನು ಗುರುವಾರ ರಾತ್ರಿ ಗಾಯಗೊಳಿಸಿದ ಘಟನೆ ನಡೆದಿದೆ. ರಿಂಗೋಲ್ಡ್ ಮನೆಯಲ್ಲಿ ವಾಸಿಸುತ್ತಿದ್ದು, ಸತ್ತ ಮಹಿಳೆಯ ಗೆಳೆಯನೆಂದು ಹೇಳಲಾಗಿದ್ದು, ಪೊಲೀಸರು ಹತ್ಯೆಗೆ ಪ್ರೇರಣೆ ಕುರಿತು ತನಿಖೆ ನಡೆಸುತ್ತಿದ್ದಾರೆಂದು ವಕ್ತಾರೆ ಇಲ್ಲಾನಾ ಸ್ಪೆಲ್ಮೆನ್ ತಿಳಿಸಿದ್ದಾರೆ.
ತುರ್ತು ಕರೆಯೊಂದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು ಅಟ್ಲಾಂಟ ಉಪನಗರ ಲಾರೆನ್ಸ್ವಿಲ್ಲೆಯ ಮನೆಯೊಂದರ ಬಾಗಿಲನ್ನು ತಟ್ಟಿದಾಗ ರಕ್ತದಿಂದ ತೊಯ್ದ ಅಂಗಿಯನ್ನು ಧರಿಸಿದ್ದ 4ರ ಪ್ರಾಯದ ಹುಡುಗಿಯೊಬ್ಬಳು ಬಾಗಿಲು ತೆಗೆದಿದ್ದಳು. ಪೊಲೀಸರು ಸುಮಾರು ರಾತ್ರಿ 8.40ಕ್ಕೆ ಮನೆಗೆ ಬಂದಿದ್ದರು. ನೆರೆಯಲ್ಲಿ ಎರಡನೇ ಮಹಡಿಯಲ್ಲಿದ್ದ ಸಮಂತಾ ಮ್ಯಾಂಚೆಸ್ಟರ್ ಎಂಬ ಮಹಿಳೆ ಪೊಲೀಸರು ಬಾಗಿಲನ್ನು ಬಡಿದಿದ್ದು ಕೇಳಿಸಿ, 'ಪೊಲೀಸರು ಆಗಮಿಸಿದ್ದಾರೆ. ಬಾಗಿಲನ್ನು ತೆಗಿ' ಎಂದು ಕೂಗಿದೆನೆಂದು ತಿಳಿಸಿದ್ದಾರೆ.
ಆದರೆ 4ರ ಪ್ರಾಯದ ಹೆಣ್ಣುಮಗು ಬಾಗಿಲು ತೆಗೆದಾಗ ಅಧಿಕಾರಿಗಳು ಆಶ್ಟರ್ಯಚಕಿತರಾದರು.ವೈದ್ಯರು ಬಾಲಕಿಯ ಅಂಗಿಯನ್ನು ಕತ್ತರಿಸುತ್ತಿದ್ದಂತೆ, ಬಾಲಕಿಯ ಹೃದಯ ಮತ್ತು ಭುಜದ ನಡುವೆ ಗುಂಡೇಟು ಬಿದ್ದಿರುವುದನ್ನು ಮ್ಯಾಂಚೆಸ್ಟರ್ ಮತ್ತು ನೆರೆಮನೆಯಾತ ಗಮನಿಸಿದರು. ಬಾಲಕಿ ತೀವ್ರ ಆಘಾತಗೊಂಡಿದ್ದರೂ ಆಕೆಯಲ್ಲಿ ಜೀವಸೆಲೆ ತುಂಬಿಕೊಂಡಿದ್ದು, ಅಳುತ್ತಿರಲಿಲ್ಲ. ನಮ್ಮ ಇಡೀ ಕುಟುಂಬವೇ ಸತ್ತಿದೆಯೆಂದು ಆಕೆ ಉದ್ಗರಿಸಿದಳು.
ಸತ್ತವರನ್ನು 28 ವರ್ಷ ವಯಸ್ಸಿನ ಅಟಾನಿಯ ಬಟ್ಲರ್, 30ರ ಪ್ರಾಯದ ಲಕೈಶಾ ಪಾರ್ಕರ್, 19ರ ಪ್ರಾಯದ ರಿಕೊ ಜಿಮ್ಮರ್ಮ್ಯಾನ್ ಮತ್ತು 11 ವರ್ಷ ವಯಸ್ಸಿನ ಬಾಲಕಿಯ ಹೆಸರು ಬಿಡುಗಡೆಯಾಗಿಲ್ಲ. ಬಟ್ಲರ್ 11 ವರ್ಷ ವಯಸ್ಸಿನ ಬಾಲಕಿ ಮತ್ತು ನಾಲ್ಕರ ಬಾಲೆಯ ತಾಯಿಯೆಂದು ವರದಿಯಾಗಿದೆ.