ಮುಂಬೈ ದಾಳಿಗಳಲ್ಲಿ ಭಾಗಿಯಾದ ಲಷ್ಕರೆ ತೊಯ್ಬಾದ ಐವರು ಆರೋಪಿಗಳ ರಹಸ್ಯ ವಿಚಾರಣೆಯನ್ನು ಭಯೋತ್ಪಾದನೆ ನಿಗ್ರಹ ಕೋರ್ಟ್ ಆರಂಭಿಸಿದ ಮರುಗಳಿಗೆಯೇ ವಿಚಾರಣೆಯನ್ನು ಸೆ.1ರವರೆಗೆ ಮುಂದೂಡಿದೆಯೆಂದು ಮೂಲಗಳು ಹೇಳಿವೆ. ಕೋರ್ಟ್ ಕಲಾಪವನ್ನು ಮಾಧ್ಯಮದಲ್ಲಿ ಪ್ರಕಟಿಸುವುದಕ್ಕೆ ಕೋರ್ಟ್ ನ್ಯಾಯಾಧೀಶ ಬಖೀರ್ ಅಲಿ ರಾನಾ ನಿಷೇಧ ವಿಧಿಸಿದರು.
ರಾವಲ್ಪಿಂಡಿಯ ಗ್ಯಾರಿಸನ್ ನಗರದ ಬಿಗಿ ಭದ್ರತೆಯ ಅಡಿಯಾಲ ಜೈಲಿನಲ್ಲಿ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಶನಿವಾರ ಬೆಳಿಗ್ಗೆ ಮಾಧ್ಯಮದಲ್ಲಿ ಪ್ರಕಟಿಸುವುದಕ್ಕೆ ನಿಷೇಧ ವಿಧಿಸಿ ಆದೇಶ ನೀಡಿದರು.ಈ ಆದೇಶವನ್ನು ಸಾರ್ವಜನಿಕಗೊಳಿಸದಿದ್ದರೂ,ವಿಚಾರಣೆಯ ನಡಾವಳಿಯನ್ನು ಸಂಪೂರ್ಣ ರಹಸ್ಯವಾಗಿ ಇಡಲಾಗುವುದು ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಹಿತಾಸಕ್ತಿಗೆ ಧಕ್ಕೆಯಾಗುವುದರಿಂದ ಯಾವುದೇ ರೀತಿಯಲ್ಲಿ ಮಾಧ್ಯಮದಲ್ಲಿ ಪ್ರಕಟಿಸಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆಯೆಂದು ಮೂಲಗಳು ಹೇಳಿವೆ.
ಸಾಕ್ಷಿದಾರರ ಮತ್ತು ನ್ಯಾಯಾಧೀಶರ ಭದ್ರತೆಗಾಗಿ ಮಾಧ್ಯಮದಲ್ಲಿ ನಿಷೇಧ ಅವಶ್ಯಕವಾಗಿದೆಯೆಂದು ಆದೇಶ ತಿಳಿಸಿದ್ದು, ಮುಂದಿನ ವಿಚಾರಣೆ ಸೆ.1ಕ್ಕೆ ಇರಿಸಲಾಗಿದ್ದು, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವೆಂದು ತಿಳಿಸಿದೆ.ಭಯೋತ್ಪಾದನೆ ನಿಗ್ರಹ ಕೋರ್ಟ್ ವಿಚಾರಣೆ ನಡೆಸುವ ಐವರು ಲಷ್ಕರೆ ಕಾರ್ಯಕರ್ತರು, ಸಂಘಟನೆಯ ಕಾರ್ಯಾಚರಣೆ ಕಮಾಂಡರ್ ಜಾಕಿಯುರ್ ರೆಹ್ಮಾನ್ ಲಖ್ವಿ, ಸಂಪರ್ಕ ತಜ್ಞ ಜರಾರ್ ಶಾ, ಅಬು ಅಲ್ ಖಾಮಾ, ಹಮದ್ ಅಮೀನ್ ಸಾದಿಖ್ ಮತ್ತು ಶಾಹಿದ್ ಜಮೀಲ್ ರಿಯಾಜ್ ಎಂದು ಹೇಳಲಾಗಿದೆ.
6ನೇ ಶಂಕಿತ ವ್ಯಕ್ತಿ ಜಮೀಲ್ ಅಹ್ಮದ್‌ನನ್ನು ಕೂಡ ಮುಂಬೈ ದಾಳಿಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಬಂಧಿಸಲಾಗಿದ್ದು, ಕೋರ್ಟ್ ಎದುರು ಹಾಜರುಪಡಿಸಲಾಯಿತು. ಅವನ ಸಂಪೂರ್ಣ ದಾಖಲೆಗಳನ್ನು ಸಲ್ಲಿಸುವಂತೆ ನ್ಯಾಯಾಧೀಶರು ಫೆಡರಲ್ ತನಿಖಾ ದಳಕ್ಕೆ ಸೂಚಿಸಿದ್ದಾರೆ.