ಅಂತರಿಕ್ಷ ನೌಕೆ ಡಿಸ್ಕವರಿ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಮಧ್ಯರಾತ್ರಿ ಉಡಾವಣೆ ನೆಲೆಯಿಂದ ಜಿಗಿಯಿತು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ 7 ಗಗನಯಾನಿಗಳನ್ನು ಹೊತ್ತ ಡಿಸ್ಕವರಿ ಹಾರಿದಾಗ ಕೆಲವು ಕಿಲೋಮೀಟರ್ ದೂರದವರೆಗೆ ಆಕಾಶದಲ್ಲಿ ಬೆಂಕಿಯುಗುಳಿತು.
ಬಳಿಕ ಪ್ರಕಾಶಮಾನವಾದ ನಕ್ಷತ್ರದಂತೆ ಗೋಚರಿಸಿ ಐದು ನಿಮಿಷಗಳಲ್ಲಿ ಕಣ್ಮರೆಯಾಯಿತು.ಟಾಸ್ಮಾನಿಯದ ಆಗ್ನೇಯಕ್ಕೆ 54 ಕಿಮೀ ಎತ್ತರದಲ್ಲಿ ಬಾಹ್ಯಾಕಾಶ ನಿಲ್ದಾಣವಿದ್ದು, ನೌಕೆಯು ಭಾನುವಾರ ರಾತ್ರಿ ಕಕ್ಷೆಗೆ ಸೇರಲಿದೆ. ಮಂಗಳವಾರ ಡಿಸ್ಕವರಿ ಉಡಾಯಿಸುವ ಪ್ರಯತ್ನವು ಗುಡುಗು,ಸಿಡಿಲಿನಿಂದ ವಿಫಲವಾಗಿತ್ತು. ಬುಧವಾರ ಇಂಧನ ಕವಾಟದ ತೊಂದರೆಯಿಂದ ಉಡಾವಣೆ ರದ್ದುಮಾಡಲಾಯಿತು.
ಶುಕ್ರವಾರ ರಾತ್ರಿ ನಾಸಾಗೆ ಅನುಕೂಲಕರವಾಗಿ ಪರಿಣಮಿಸಿ, ಮಧ್ಯರಾತ್ರಿಗೆ ಕೆಲವೇ ಸೆಕೆಂಡುಗಳಿರುವಂತೆ ನೌಕೆಯನ್ನು ಉಡಾಯಿಸಲಾಯಿತು.ಬಾಹ್ಯಾಕಾಶ ನೌಕೆಯು 17,000 ಪೌಂಡ್ ಪ್ರಯೋಗಶಾಲೆಯ ಗೇರ್ಗಳನ್ನು ಸರಬರಾಜು ಮಾಡಲಿದೆ. ನವೆಂಬರ್ನಲ್ಲಿ ನೌಕೆ ಪುನಃ ಭೇಟಿ ನೀಡುವ ತನಕ ನಿಲ್ದಾಣದಲ್ಲೇ 6 ಇಲಿಗಳನ್ನು ಇರಿಸುವ ಮೂಲಕ ಪ್ರಯೋಗ ನಡೆಸಲಾಗುತ್ತಿದೆ. ಬಾಹ್ಯಾಕಾಶದಲ್ಲಿ ಮಾನವ ಬಿಟ್ಟರೆ ಇಲಿಗಳು ಸುದೀರ್ಘ ಅವಧಿ ಕಳೆಯುವ ಪ್ರಾಣಿಗಳೆಂದು ಹೇಳಲಾಗಿದ್ದು, ಬಾಹ್ಯಾಕಾಶದಲ್ಲಿ ಅವುಗಳ ಮೂಳೆ ಸವೆತದ ಪ್ರಮಾಣ ಮುಂತಾದುವನ್ನು ಅಧ್ಯಯನ ಮಾಡಲಾಗುತ್ತದೆ.