ನೇರವಾಗಿ ಶ್ವಾಸಕೋಶಕ್ಕೆ ಹಾನಿಯುಂಟುಮಾಡುವ ತೀವ್ರ ಸ್ವರೂಪದ ಹಂದಿ ಜ್ವರದ ಬಗ್ಗೆ ವೈದ್ಯರು ಎಚ್ಚರಿಸಿದ್ದು, ಆರೋಗ್ಯವಂತ ಯುವಜನರಲ್ಲಿ ಕೂಡ ತೀವ್ರ ಅಸ್ವಸ್ಥತೆ ಉಂಟುಮಾಡಲಿದ್ದು, ದುಬಾರಿ ಆಸ್ಪತ್ರೆಯ ಚಿಕಿತ್ಸೆ ಬೇಕಾಗುತ್ತದೆಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತಿಳಿಸಿದೆ.
ಹೊಸ ಸ್ವರೂಪದ ಎಚ್1ಎನ್1 ವೈರಸ್ ಸೋಂಕಿನಿಂದ ಆಸ್ಪತ್ರೆಗೆ ಸೇರಿದವರಿಗೆ ತೀವ್ರ ನಿಗಾ ಘಟಕದ ಅಗತ್ಯವಿದ್ದು, ಈಗಾಗಲೇ ಆರೋಗ್ಯಸೇವೆಯ ಮೇಲೆ ಬಿದ್ದಿರುವ ಹೊರೆ ಮತ್ತಷ್ಟು ಹೆಚ್ಚಲಿದೆಯೆಂದು ಡಬ್ಲ್ಯುಎಚ್‌ಒ ತಿಳಿಸಿದೆ. ದಕ್ಷಿಣ ಗೋಳಾರ್ಧದಲ್ಲಿ ಚಳಿಗಾಲದ ಋತುಮಾನದಲ್ಲಿ, ತೀವ್ರ ನಿಗಾ ಘಟಕದ ಅಗತ್ಯವು ಆರೋಗ್ಯ ಸೇವೆಯ ಮೇಲೆ ದೊಡ್ಡ ಹೊರೆಯೆಂದು ತಿಳಿಸಿದೆ. ಈ ರೋಗಿಗಳಲ್ಲಿ ವೈರಸ್ ನೇರವಾಗಿ ಶ್ವಾಸಕೋಶಕ್ಕೆ ದಾಳಿ ಮಾಡಲಿದ್ದು, ತೀವ್ರ ಉಸಿರಾಟದ ವೈಫಲ್ಯ ಉಂಟುಮಾಡುತ್ತದೆ.
ಈ ಜೀವಗಳನ್ನು ಉಳಿಸಲು ತೀವ್ರ ನಿಗಾ ಘಟಕದಲ್ಲಿ ತಜ್ಞ ಚಿಕಿತ್ಸೆಯ ಅಗತ್ಯವಿರುತ್ತದೆಯೆಂದು ಅದು ತಿಳಿಸಿದೆ.ಉತ್ತರ ಗೋಳಾರ್ಧದಲ್ಲಿ ಹಂದಿಜ್ವರದ ಹೆಮ್ಮಾರಿಯ ಎರಡನೇ ಅಲೆಗೆ ಸಿದ್ಧವಾಗುವಂತೆ ಡಬ್ಲ್ಯುಎಚ್‌ಒ ತಿಳಿಸಿದೆ. ಕೆಲವು ಆರೋಗ್ಯದ ಸಮಸ್ಯೆಗಳು ತೀವ್ರ ಮತ್ತು ಮಾರಣಾಂತಿಕ ಅಸ್ವಸ್ಥತೆ ಅಪಾಯ ಹೆಚ್ಚಿಸುತ್ತದೆ. ಇವು ಉಸಿರಾಟದ ತೊಂದರೆಯಿರುವ ಆಸ್ತಮಾ, ಮಧುಮೇಹ ಮುಂತಾದ ಕಾಯಿಲೆಗಳಿದ್ದರೆ ಹಂದಿಜ್ವರದ ಅಪಾಯ ಹೆಚ್ಚು ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.
ಜಾಗತಿಕವಾಗಿ 23 ಕೋಟಿ ಜನರು ಆಸ್ತಮಾದಿಂದ ಬಳಲುತ್ತಿದ್ದು, 22 ಕೋಟಿ ಜನರು ಮಧುಮೇಹದ ಕಾಯಿಲೆಗೆ ಗುರಿಯಾಗಿದ್ದಾರೆಂದು ಡಬ್ಲ್ಯುಎಚ್‌ಒ ಅಂದಾಜು ಮಾಡಿದೆ. ತೀವ್ರ ಸೋಂಕಿಗೆ ಸ್ಥೂಲಕಾಯ ಸಹ ತೀವ್ರ ಸೋಂಕಿನ ಅಪಾಯ ಹೆಚ್ಚಿಸುತ್ತದೆಂದು ಅದು ಹೇಳಿದೆ.