ಅಮೆರಿಕ ಪೂರೈಕೆ ಮಾಡಿದ ಕ್ಷಿಪಣಿಗಳನ್ನು ಪಾಕಿಸ್ತಾನ ಅಕ್ರಮವಾಗಿ ಭಾರತದ ನೆಲದ ಮೇಲೆ ಗುರಿಯಿರಿಸಲು ಬದಲಾವಣೆ ಮಾಡಿದ ಸಂಗತಿಯನ್ನು ಅಮೆರಿಕ ಪತ್ತೆಹಚ್ಚಿದೆ. ಅಪಾಯಕಾರಿ, ಅಸ್ಥಿರ ರಾಷ್ಟ್ರಕ್ಕೆ ಶಸ್ತ್ರಾಸ್ತ್ರಗಳ ಅನಿಯಂತ್ರಿತ ಪೂರೈಕೆಯಿಂದ ವಲಯಕ್ಕೆ ಭದ್ರತಾ ಬೆದರಿಕೆಯುಂಟಾಗಿದೆಯೆಂದು ಹೇಳಲಾಗಿದೆ.
ಏಪ್ರಿಲ್ 23 ರಂದು ಪಾಕಿಸ್ತಾನದ ಅನುಮಾನಾಸ್ಪದ ಕ್ಷಿಪಣಿ ಪರೀಕ್ಷೆ ಹಿನ್ನೆಲೆಯಲ್ಲಿ ಪಾಕಿಸ್ತಾನವು ಅಮೆರಿಕ ಪೂರೈಸಿದ ಹಡಗು ನಿಗ್ರಹ ಹಾರ್ಪೂನ್ ಕ್ಷಿಪಣಿಯನ್ನು ಭೂದಾಳಿಗಳಿಗೆ ಬದಲಿಸಿದೆಯೆಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ಶಸ್ತ್ರಾಸ್ತ್ರ ನಿಯಂತ್ರಣ ರಫ್ತಿನ ಕಾಯ್ದೆಯ ಉಲ್ಲಂಘನೆಯೆಂದು ಅವರು ತಿಳಿಸಿದ್ದು, ಈ ಪರೀಕ್ಷೆಯನ್ನು ಗೋಪ್ಯವಾಗಿ ಇಡಲಾಗಿದ್ದು, ಪಾಕಿಸ್ತಾನ ಬಹಿರಂಗವಾಗಿ ಪ್ರಕಟಿಸಿರಲಿಲ್ಲವೆಂದು ಹೇಳಿದೆ.ಅಮೆರಿಕದ ಆರೋಪದಿಂದ ವಾಷಿಂಗ್ಟನ್ ಮತ್ತು ಇಸ್ಲಾಮಾಬಾದ್ ನಡುವೆ ಮತ್ತೆ ಹೊಸ ಉದ್ವಿಗ್ನತೆಗೆ ದಾರಿ ಕಲ್ಪಿಸಲಿದೆ.
ಕಳೆದ ಜೂನ್ನಲ್ಲಿ ಪ್ರಧಾನಿ ಗಿಲಾನಿ ಮತ್ತು ಪಾಕ್ ಉನ್ನತ ಅಧಿಕಾರಿಗಳಿಗೆ ಈ ಕುರಿತು ಅಮೆರಿಕ ರಾಜತಾಂತ್ರಿಕ ಪ್ರತಿಭಟನೆಯನ್ನು ಸೂಚಿಸಿದೆಯೆಂದು ನ್ಯೂಯಾರ್ಕ್ ಟೈಮ್ಸ್ ಶನಿವಾರ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಅಮೆರಿಕ ನಿರ್ಮಿತ ಪಿ-3ಸಿ ವಿಮಾನವನ್ನು ಭೂದಾಳಿ ಯೋಜನಗಳಿಗೆ ಕೂಡ ಬದಲಿಸಲಾಗಿದ್ದು, ಇದು ಕೂಡ ಅಮೆರಿಕದ ಕಾನೂನಿನ ಉಲ್ಲಂಘನೆಯೆಂದು ಅಮೆರಿಕ ಆರೋಪಿಸಿದ್ದಾಗಿ ವೆಬ್ಸೈಟ್ ತಿಳಿಸಿದೆ.