ಹಂದಿ ಜ್ವರವು ಇತರೆಲ್ಲ ವೈರಸ್‌ಗಳಿಗಿಂತ ನಾಲ್ಕು ಪಟ್ಟು ವೇಗವಾಗಿ ಹರಡುತ್ತದೆ ಮತ್ತು ಶೇ. 40ರಷ್ಟು ಮರಣಗಳು ಆರೋಗ್ಯವಂತ ಯುವಜನರಿಗೆ ಸಂಬಂಧಿಸಿದೆಯೆಂದು ವಿಶ್ವ ಆರೋಗ್ಯ ಸಂಸ್ಥೆಯ ಉನ್ನತ ಆರೋಗ್ಯಾಧಿಕಾರಿ ಸಂದರ್ಶನದಲ್ಲಿ ತಿಳಿಸಿದ್ದಾರೆ. ಹಂದಿ ಜ್ವರದ ವೈರಸ್ ಊಹಿಸಲಾಗದಷ್ಟು ವೇಗದಲ್ಲಿ ಹರಡುತ್ತದೆಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕಿ ಜನರಲ್ ಮಾರ್ಗರೇಟ್ ಚಾನ್ ಫ್ರಾನ್ಸ್ ಲೆ ಮೊಂಡೆ ದಿನಪತ್ರಿಕೆಗೆ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಬೇರೆ ವೈರಾಣುಗಳು 6 ತಿಂಗಳು ತೆಗೆದುಕೊಳ್ಳುವ ದೂರವನ್ನು ಇದು 6 ವಾರಗಳಲ್ಲೇ ಪ್ರಯಾಣಿಸುತ್ತದೆಂದು ಚಾನ್ ಹೇಳಿದ್ದಾರೆ. ಹಂದಿ ಜ್ವರಕ್ಕೆ ಬಲಿಯಾಗುವ ಶೇ.60ರಷ್ಟು ಮಂದಿ ಮುಂಚಿತವಾಗಿ ಕೆಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಅಂದರೆ ಶೇ.40ರಷ್ಟು ಮರಣಗಳಿಗೆ ಯುವಜನರು ಗುರಿಯಾಗಲಿದ್ದು, 5ರಿಂದ 7 ದಿನಗಳ ಅಂತರದಲ್ಲಿ ವೈರಾಣು ಜ್ವರಕ್ಕೆ ಸಾಯುತ್ತಾರೆಂದು ಚಾನ್ ಹೇಳಿದ್ದಾರೆ.
ಇದೊಂದು ಅತ್ಯಂತ ಆತಂಕಕಾರಿ ಸಂಗತಿಯೆಂದು ಹೇಳಿದ ಅವರು, ಸಾಂದ್ರತೆಯ ಜನಸಂಖ್ಯೆಯಲ್ಲಿ ಶೇ.30ರಷ್ಟು ಜನರು ಹಂದಿಜ್ವರದ ಸೋಂಕಿನ ಅಪಾಯಕ್ಕೆ ಒಳಗಾಗಬಹುದು ಎಂದು ನುಡಿದಿದ್ದಾರೆ. ಏಪ್ರಿಲ್‌ನಲ್ಲಿ ಈ ವೈರಾಣು ಸೋಂಕು ಪತ್ತೆಯಾದ ಬಳಿಕ ಸುಮಾರು 2180 ಜನರು ವಿಶ್ವಾದ್ಯಂತ ಬಲಿಯಾಗಿದ್ದಾರೆ.