ಪಾಕಿಸ್ತಾನದ ವಾಯವ್ಯ ಸ್ವಾಟ್ ಕಣಿವೆಯಲ್ಲಿ ಭಾನುವಾರ ಸಂಭವಿಸಿದ ಆತ್ಮಾಹುತಿ ದಾಳಿಯಲ್ಲಿ ಸುಮಾರು 15 ಮಂದಿ ಪೊಲೀಸರು ಹತರಾಗಿದ್ದಾರೆ. ತಾಲಿಬಾನ್ ಉಗ್ರರ ಕರಾಳಹಸ್ತದಿಂದ ಸ್ವಾಟ್ ಪ್ರದೇಶ ಮುಕ್ತವಾಗಿದೆಯೆಂದು ಸೇನೆ ಹೇಳಿದ ಒಂದು ತಿಂಗಳಲ್ಲೇ ಸ್ವಾಟ್ ಕಣಿವೆ ಆತ್ಮಾಹುತಿ ದಾಳಿಯಿಂದ ಮತ್ತೆ ತತ್ತರಿಸಿದೆ.
ಮಿಂಗೋರಾ ಪಟ್ಟಣದಲ್ಲಿ ಪೊಲೀಸರಿಗೆ ತರಬೇತಿ ನೀಡುತ್ತಿದ್ದಾಗ, ಮೈದಾನದೊಳಕ್ಕೆ ಆತ್ಮಾಹುತಿ ಬಾಂಬರ್ ಪ್ರವೇಶಿಸಿ ನೇಮಕಾತಿ ಸಿಬ್ಬಂದಿಯ ಸಮೀಪದಲ್ಲೇ ಸ್ವತಃ ಸ್ಫೋಟಿಸಿಕೊಂಡ ಎಂದು ಸ್ವಾಟ್ ಪೊಲೀಸ್ ಮುಖ್ಯಸ್ಥ ಖಾಜಿ ಗುಲಾಂ ಫರೂಕ್ ತಿಳಿಸಿದ್ದಾರೆ. ಮಿಂಗೋರಾದಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಪಟ್ಟಣದಲ್ಲಿ ಪಡೆಗಳು ಮತ್ತು ಪೊಲೀಸರು ಗಸ್ತುತಿರುಗುತ್ತಿದ್ದು, ಜನರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದಾರೆ.
ತಾಲಿಬಾನ್ ಉಗ್ರಗಾಮಿಗಳ ಹಿಡಿತದಿಂದ ಸ್ವಾಟ್ ಕಣಿವೆಯನ್ನು ಮುಕ್ತಗೊಳಿಸಿರುವುದಾಗಿ ಮಿಲಿಟರಿ ಜಂಬಕೊಚ್ಚಿಕೊಂಡಿತ್ತು. ಆದರೆ ಮಿಂಗೋರಾದಲ್ಲಿ ನಡೆದ ಪ್ರಥಮ ಪ್ರಮುಖ ದಾಳಿಯಿಂದ ಉಗ್ರರು ತಮ್ಮ ಕರಾಳಹಸ್ತವನ್ನು ಅಲ್ಲಿ ಚಾಚಿರುವುದಕ್ಕೆ ನಿದರ್ಶನ ನೀಡಿದೆ. ಮಿಂಗೋರಾ ನಿವಾಸಿಗಳು ಗುಂಡಿನ ಚಕಮಕಿಯ ಭೀತಿಯಿಂದ ಸ್ಥಳವನ್ನು ತೊರೆದಿದ್ದಾರೆ.