ಪ್ರತ್ಯೇಕತಾವಾದಿ ಎಂದು ಚೀನಾ ಹಳಿದಿರುವ ಟಿಬೆಟ್ ಧಾರ್ಮಿಕ ಧರ್ಮಗುರು ದಲೈಲಾಮಾ ತೈವಾನ್‌ಗೆ ಭಾನುವಾರ ದಿಢೀರ್ ಭೇಟಿ ನೀಡಿದ್ದಾರೆ. ಚಂಡಮಾರುತ ಮೊರಾಕೊಟ್ ದಾಳಿಗೆ ಗುರಿಯಾದ ಸಂತ್ರಸ್ತರ ಸಾಂತ್ವನಕ್ಕೆ ಅವರು ತೈವಾನ್‌ಗೆ ತೆರಳಿದ್ದಾರೆ. ಚೀನಾ ದಲೈಲಾಮಾ ಅವರ ವಿದೇಶ ಯಾತ್ರೆಯನ್ನು ವಿರೋಧಿಸಿದ್ದು, ಕಳೆದ ವಾರ ಅವರನ್ನು ಆಮಂತ್ರಿಸಿದ ತೈವಾನ್ ಪ್ರತಿಪಕ್ಷದ ನಾಯಕರನ್ನು ಖಂಡಿಸಿದೆ.
ಮೊರಾಕೊಟ್ ಚಂಡಮಾರುತ 50 ವರ್ಷಗಳಲ್ಲೇ ಭೀಕರವೆಂದು ಹೇಳಲಾಗಿದ್ದು, ಸುಮಾರು 745 ಜನರನ್ನು ಬಲಿತೆಗೆದುಕೊಂಡಿದೆ.ಹಾನಿಗೆ ಪ್ರತಿಕ್ರಿಯಿಸುವಲ್ಲಿ ವಿಳಂಬ ಮಾಡಿದ್ದಾರೆಂಬ ಆರೋಪಕ್ಕೆ ಗುರಿಯಾದ ಬೀಜಿಂಗ್ ಸ್ನೇಹಿ ತೈವಾನ್ ಅಧ್ಯಕ್ಷ ಮಾ ಯಿಂಗ್ ಜಿಯೊ ದಲೈಲಾಮಾ ಭೇಟಿಗೆ ಅವಕಾಶ ನೀಡಿದೆ.
ಮಾವೊ ಜೆಡಾಂಗ್ ಪಡೆಗಳು ಚೀನದ ಆಂತರಿಕ ಯುದ್ಧವನ್ನು ಗೆದ್ದು, ಚಿಯಾಂದ್ ಕೈ ಶೇಖ್ ರಾಷ್ಟ್ರೀಯವಾದಿಗಳು ದ್ವೀಪಕ್ಕೆ ಪಲಾಯನ ಮಾಡಿದಾಗಿನಿಂದ ತೈವಾನ್ ಮೇಲೆ 1949ರಿಂದ ಚೀನಾ ತನ್ನ ಪ್ರಭುತ್ವವನ್ನು ಸಾರಿದ್ದು, ತನ್ನ ಆಡಳಿತದಡಿಯಲ್ಲಿ ತರುವ ಶಪಥ ತೊಟ್ಟಿದೆ. ಚೀನದ ವಿರುದ್ಧ ಬಂಡಾಯವೇಳಲು ಯತ್ನಿಸಿ 1959ರಲ್ಲಿ ಟಿಬೆಟ್ ತ್ಯಜಿಸಿದ್ದ ದಲೈಲಾಮಾ, ಭಾರತದಿಂದ ತೈವಾನ್‌ಗೆ ತೆರಳಿ ಸಾಮೂಹಿಕ ಪ್ರಾರ್ಥನ ಮುಂತಾದ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.