ಪಾಕಿಸ್ತಾನ ಅಮೆರಿಕ ಕಳಿಸಿದ ಕ್ಷಿಪಣಿಗಳನ್ನು ಆಧುನೀಕರಣಗೊಳಿಸಿ ತನ್ನ ಭೂದಾಳಿ ಸಾಮರ್ಥ್ಯವನ್ನು ಅಕ್ರಮವಾಗಿ ಹೆಚ್ಚಿಸಿಕೊಳ್ಳುತ್ತಿದೆಯೆಂಬ ಆರೋಪಗಳನ್ನು ಪಾಕಿಸ್ತಾನ ದೃಢವಾಗಿ ನಿರಾಕರಿಸಿದೆ. ಅಮೆರಿಕ ಉಲ್ಲೇಖಿಸಿರುವ ಕ್ಷಿಪಣಿಗಳಿಗೆ ಯಾವುದೇ ಮಾರ್ಪಾಟು ಮಾಡಿಲ್ಲವೆಂದು ವಿದೇಶಾಂಗ ವಕ್ತಾರ ಅಬ್ದುಲ್ ಬಸೀತ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯವಾಗಿ ಪಾಕಿಸ್ತಾನ ಮತ್ತು ಅದರ ಸೇನಾಪಡೆಗಳ ವರ್ಚಸ್ಸು ಕೆಡಿಸಲು ಈ ಆರೋಪಗಳು ಪಿತೂರಿಯ ಭಾಗವೆಂದು ಬಸೀತ್ ಹೇಳಿದ್ದಾರೆ.ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಇಸ್ಲಾಮಾಬಾದ್ ಭೂದಾಳಿಗಳಿಗೆ ಗುರಿಯಿಡುವ ಸಾಮರ್ಥ್ಯ ಹೆಚ್ಚಿಸಿ, ಭಾರತಕ್ಕೆ ಬೆದರಿಕೆಯೊಡ್ಡಲು ಅಮೆರಿಕ ನಿರ್ಮಿತ ಕ್ಷಿಪಣಿಗಳನ್ನು ಅಕ್ರಮವಾಗಿ ಆಧುನಿಕಗೊಳಿಸಿದೆಯೆಂದು ಅಮೆರಿಕದ ಉನ್ನತ ಆಡಳಿತ ಮತ್ತು ಕಾಂಗ್ರೆಸ್ ಅಧಿಕಾರಿಗಳು ನಂಬಿದ್ದಾರೆ.
ಶೀತಲ ಯುದ್ಧದ ಯುಗದಲ್ಲಿ ರಕ್ಷಣಾತ್ಮಕ ಶಸ್ತ್ರವಾಗಿ ರೀಗನ್ ಆಡಳಿತ ಒದಗಿಸಿದ್ದ ಹಾರ್ಪೂನ್ ಹಡಗು ನಿಗ್ರಹ ಸಾಂಪ್ರದಾಯಿಕ ಕ್ಷಿಪಣಿಗಳನ್ನು ಪಾಕಿಸ್ತಾನ ಬದಲಾಯಿಸಿದೆಯೆಂದು ಅಧಿಕಾರಿಗಳು ಆರೋಪಿಸಿದ್ದಾರೆ.