ಪಾಕಿಸ್ತಾನದ ಪರಮಾಣು ನೆಲೆಗಳ ಮೇಲೆ ದಾಳಿ ಮಾಡಿದ ಪಕ್ಷದಲ್ಲಿ ಭಾರತದ ಅಣ್ವಸ್ತ್ರ ನೆಲೆಗಳ ಮೇಲೆ ದಾಳಿಗೆ ಸಿದ್ಧರಾಗಿರಿ ಎಂದು ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಬೆನಜೀರ್ ಭುಟ್ಟೊ ಪಾಕಿಸ್ತಾನ ವಾಯುಪಡೆಗೆ ಆದೇಶಿಸಿದ್ದರು ಎಂದು ಮಾಜಿ ಸೇನಾ ಮುಖಂಡ ಜನರಲ್ ಮಿರ್ಝಾ ಅಸ್ಲಾಂ ಬೇಗ್ ತಿಳಿಸಿದ್ದಾರೆ.
ಅಮೆರಿಕ, ಇಸ್ರೇಲ್ ಮತ್ತು ಭಾರತ ಪಾಕಿಸ್ತಾನದ ಪರಮಾಣು ನೆಲೆಗಳ ಮೇಲೆ ದಾಳಿಗೆ ಯೋಜಿಸಿದ್ದಾರೆಂದು ವರದಿಗಳು ಉದ್ಭವಿಸಿದ ಬಳಿಕ ಆಗಿನ ಪ್ರಧಾನಮಂತ್ರಿ ಭುಟ್ಟೊ ಪಿಎಎಫ್‌ಗೆ ಮೇಲಿನ ಆದೇಶ ನೀಡಿದ್ದರೆಂದು ಬೇಗ್ ಟಿವಿ ಸುದ್ದಿ ಚಾನೆಲ್‌ಗೆ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಆದರೆ ಈ ಕುರಿತು ಬೇಗ್ ಹೆಚ್ಚಿನ ವಿವರಗಳನ್ನು ನೀಡಲಿಲ್ಲ. ಬೆನಜೀರ್ ಭುಟ್ಟೊ ಮತ್ತೆ ಅಧಿಕಾರಕ್ಕೆ ಬರದಂತೆ ಖಾತರಿಗೆ 1988ರಲ್ಲಿ ರಚನೆಯಾದ ಇಸ್ಲಾಮಿ ಜಮಹೂರಿ ಇತ್ತೆಹಾದ್ ಪಕ್ಷಕ್ಕೆ ಸೇರುವಂತೆ ರಾಜಕೀಯ ನಾಯಕರ ಮನವೊಲಿಸುವುದಕ್ಕಾಗಿ ದಿವಂಗತ ರಾಜಕಾರಣಿ ಮಹಮೂದ್ ಹರೂನ್ ಅವರಿಗೆ ಸೌದಿಗಳು ಚೀಲದ ತುಂಬ ಹಣ ನೀಡಿದ್ದರೆಂದು ಬೇಗ್ ತಿಳಿಸಿದ್ದಾರೆ. ಇಸ್ಲಾಮಿ ಜಾಮ್‌ಹೂರಿ ಇತ್ತೆಹಾದ್ ಪಕ್ಷಕ್ಕೆ ಆರ್ಥಿಕನೆರವಿಗಾಗಿ ಈ ಹಣವನ್ನು ನೀಡಲಾಗಿತ್ತೆಂದು ಅವರು ಹೇಳಿದ್ದಾರೆ.