ನವದೆಹಲಿ: ಮಧ್ಯಪ್ರದೇಶದ ಎಟಿಎಸ್ ಪೊಲೀಸರು ನಕಲಿ ಕರೆನ್ಸಿ ಜಾಲಕ್ಕೆ ಸಂಬಂಧಪಟ್ಟಂತೆ ಇಬ್ಬರು ನೇಪಾಳಿ ಪೌರರನ್ನು ಬಂಧಿಸಿದಾಗ ನೇಪಾಳದ ಮಾಜಿ ರಾಜಕುಮಾರ ಪರಾಸ್ ಭಾರತದ ಮೋಸ್ಟ್ ವಾಂಟಡ್ ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂ ಜತೆ ಸಂಪರ್ಕ ಹೊಂದಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ನೇಪಾಳದ ಮಾಜಿ ದೊರೆ ಜ್ಞಾನೇಂದ್ರ ಅವರ ಪುತ್ರನಾಗಿರುವ ಪರಾಸ್, ಸದ್ಯಕ್ಕೆ ಸಿಂಗಪುರದಲ್ಲಿ ಆಶ್ರಯ ಪಡೆದಿದ್ದಾನೆಂದು ಹೇಳಲಾಗಿದೆ. ನೇಪಾಳದಿಂದ ಭಾರತದೊಳಕ್ಕೆ ನಕಲಿ ಕರೆನ್ಸಿ ನೋಟುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ನೇಪಾಳಿ ಪೌರರ ತನಿಖೆ ನಡೆಸಿದಾಗ ದಾವೂದ್ ಇಬ್ರಾಹಿಂ ಜಾಲವು ನಕಲಿ ಕರೆನ್ಸಿ ನೋಟುಗಳನ್ನು ನೇಪಾಳದ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.
ಪ್ರಮುಖ ಸಚಿವರೊಬ್ಬರ ಪುತ್ರ ಯುನುಸ್ ಅನ್ಸಾರಿಯು ರಾಜ ಜ್ಞಾನೇಂದ್ರನ ಪುತ್ರ ಪರಾಸ್ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಡುವೆ ಸಂಪರ್ಕ ಸೇತುವಾಗಿ ಕೆಲಸ ಮಾಡುತ್ತಿದ್ದು, ಕೋಟ್ಯಂತರ ರೂಪಾಯಿ ನಕಲಿ ನೋಟುಗಳನ್ನು ಭಾರತಕ್ಕೆ ದೂಡುತ್ತಿದ್ದರೆಂದು ವರದಿಯಾಗಿದೆ.
ನಕಲಿ ಕರೆನ್ಸಿಯ ಮುದ್ರಣ ಮತ್ತು ತಯಾರಿಕೆಯನ್ನು ದಾವೂದ್ ನಿರ್ವಹಿಸುತ್ತಿದ್ದು, ಪರಾಸ್ ಇತರೆ ರಾಷ್ಟ್ರಗಳಿಂದ ನೇಪಾಳಕ್ಕೆ ಸಾಗಣೆ ಮಾಡುವಲ್ಲಿ ಪರಾಸ್ ನೆರವಾಗುತ್ತಿದ್ದ ಮತ್ತು ಬಳಿಕ ಅದು ಭಾರತಕ್ಕೆ ಹರಿದುಹೋಗುತ್ತಿತ್ತೆಂದು ಮೂಲಗಳು ತಿಳಿಸಿವೆ. ಭಾರತ-ನೇಪಾಳ ಗಡಿಯಲ್ಲಿ ನಕಲಿ ನೋಟುಗಳು ಸುಸೂತ್ರವಾಗಿ ದಾಟಿಹೋಗಲು ಪರಾಸ್ ತನ್ನ ಪ್ರಭಾವ ಬಳಸುತ್ತಿದ್ದನೆಂದು ವರದಿಯಾಗಿದೆ.