ವಾಷಿಂಗ್ಟನ್, ಮಂಗಳವಾರ, 1 ಸೆಪ್ಟೆಂಬರ್ 2009( 12:15 IST )
ಅಮೆರಿಕ ನಿರ್ಮಿತ ಹಾರ್ಪೂನ್ ಹಡಗು ನಿಗ್ರಹ ಕ್ಷಿಪಣಿಯನ್ನು ಪಾಕಿಸ್ತಾನವು ಭಾರತದ ಮೇಲೆ ಭೂದಾಳಿಗಳನ್ನು ನಡೆಸುವ ಸಾಮರ್ಥ್ಯಕ್ಕೆ ಅಕ್ರಮವಾಗಿ ಬದಲಾಯಿಸಿರುವ ಕ್ರಮವನ್ನು ಅಮೆರಿಕ ಗಂಭೀರವಾಗಿ ತೆಗೆದುಕೊಂಡಿದೆ. ನಾವು ಪಾಕಿಸ್ತಾನ ಸರ್ಕಾರದ ಜತೆ ಈ ವಿಷಯವನ್ನು ಎತ್ತಿದ್ದೇವೆ. ಪರಸ್ಪರ ಒಪ್ಪಿತ ತಪಾಸಣೆಗಳ ಒಪ್ಪಂದದ ಮೇಲೆ ಪಾಕಿಸ್ತಾನ ಸರ್ಕಾರ ಸ್ಪಂದಿಸಿದೆಯೆಂದು ಸಾರ್ವಜನಿಕ ವ್ಯವಹಾರಗಳ ವಿದೇಶಾಂಗ ಸಹಾಯಕ ಕಾರ್ಯದರ್ಶಿ ಪಿ.ಜೆ.ಕ್ರೌಲೆ ತಿಳಿಸಿದ್ದಾರೆ.
ಪಾಕಿಸ್ತಾನ ಹಾರ್ಪೂನ್ ಕ್ಷಿಪಣಿಯನ್ನು ಅಕ್ರಮವಾಗಿ ಭಾರತದ ಮೇಲೆ ಭೂದಾಳಿ ಸಾಮರ್ಥ್ಯಕ್ಕೆ ಬದಲಿಸಿದೆಯೆಂದು ಹೆಸರು ಹೇಳಲು ಬಯಸದ ಅಮೆರಿಕ ಅಧಿಕಾರಿಯನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ತಿಳಿಸಿದೆ. 1985 ಮತ್ತು 1988ರ ನಡುವೆ ರೋನಾಲ್ಡ್ ರೇಗನ್ ಆಡಳಿತವು ಪಾಕಿಸ್ತಾನಕ್ಕೆ 165 ಹಾರ್ಪೂನ್ ಕ್ಷಿಪಣಿಗಳನ್ನು ಪೂರೈಸಿತ್ತು.ಅಮೆರಿಕ ನಿರ್ಮಿತ ಪಿ-3ಸಿ ವಿಮಾನವನ್ನು ಕೂಡ ಭೂದಾಳಿ ಕಾರ್ಯಾಚರಣೆಗೆ ಪಾಕಿಸ್ತಾನ ಬದಲಿಸಿದೆಯೆಂದು ಅಮೆರಿಕ ಆರೋಪಿಸಿದೆ.
ಇವೆರಡೂ ಶಸ್ತ್ರಾಸ್ತ್ರ ನಿಯಂತ್ರಣ ರೆಫ್ತು ಕಾಯ್ದೆ ಸೇರಿದಂತೆ ಅಮೆರಿಕದ ಕಾನೂನಿನ ಉಲ್ಲಂಘನೆಯಾಗಿದೆ.ಪಾಕಿಸ್ತಾನದ ಜತೆ ಒಪ್ಪಂದವು ಪ್ರಮುಖವಾಗಿದ್ದು, ಇದು ಕೇವಲ ಪಾಕಿಸ್ತಾನಕ್ಕೆ ಮಾತ್ರ ಸೀಮಿತವಲ್ಲ. ನಾವು ರಕ್ಷಣಾ ಸಾಮಗ್ರಿಗಳನ್ನು ಯಾವುದೇ ರಾಷ್ಟ್ರದ ಜತೆ ವಿನಿಮಯ ಮಾಡಿಕೊಂಡರೂ ಇಂತಹ ಒಪ್ಪಂದ ಮಾಡುತ್ತೇವೆಂದು ಕ್ರೌಲಿ ಹೇಳಿದ್ದಾರೆ.