ಬ್ಯಾಂಕಾಕ್, ಮಂಗಳವಾರ, 1 ಸೆಪ್ಟೆಂಬರ್ 2009( 12:14 IST )
ಪಾಕಿಸ್ತಾನದ ರಿಯಾಲಿಟಿ ಶೊ ಸ್ಪರ್ಧಿಯೊಬ್ಬರು ಸಾವಿಗೆ ಸವಾಲು ಹಾಕುವ ಪ್ರದರ್ಶನ ನೀಡಲು ಹೋಗಿ ನೀರುಪಾಲಾದ ಘಟನೆ ಬ್ಯಾಂಕಾಕ್‌ನಲ್ಲಿ ನಡೆದಿದೆ.
ಯೂನಿ ಲಿವರ್ ಪಾಕಿಸ್ತಾನವು ಈ ಪ್ರದರ್ಶನವನ್ನು ಪ್ರಾಯೋಜಿಸಿತ್ತೆಂದು ವರದಿಯಾಗಿದೆ. 32 ವರ್ಷ ವಯಸ್ಸಿನ ಸಾದ್ ಖಾನ್ ಬ್ಯಾಂಕಾಕ್ ಸರೋವರವೊಂದರಲ್ಲಿ ಸುಮಾರು 15 ಪೌಂಡ್ ತೂಕದ ಭಾರವನ್ನು ಬೆನ್ನಿಗೆ ಕಟ್ಟಿಕೊಂಡು ಈಜುತ್ತಿದ್ದನೆಂದು ಹೇಳಲಾಗಿದೆ.
ಆದರೆ ಬೆನ್ನಿನ ಬಾರ ತಾಳಲಾರದೇ ಖಾನ್ ಸಹಾಯಕ್ಕಾಗಿ ಆರ್ತನಾದ ಮಾಡಿದನೆಂದು ತಿಳಿದುಬಂದಿದೆ. ರಿಯಾಲಿಟಿ ಶೋನ ಇತರೆ ಸಿಬ್ಬಂದಿ ಭಯವಿಹ್ವಲರಾದರು ಮತ್ತು ಈಜುಗಾರರು ಆಳವಾದ ನೀರಿನಲ್ಲಿ ಅವರ ಶೋಧ ನಡೆಸಿದ ಬಳಿಕ ಅವರ ದೇಹ ಸಿಕ್ಕಿತೆಂದು ಹೇಳಲಾಗಿದೆ.
ಆ.19ರಂದು ಈ ಘಟನೆ ನಡೆದಿದ್ದರೂ, ಕರಾಚಿಗೆ ಖಾನ್ ದೇಹವನ್ನು ಸಾಗಿಸುವ ತನಕ ಈ ವಿಷಯ ಬೆಳಕಿಗೆ ಬಂದಿರಲಿಲ್ಲ. ರಿಯಾಲಿಟಿ ಶೋವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.