ಇಸ್ಲಾಮಾಬಾದ್ ಹೊಸ ಅಣ್ವಸ್ತ್ರ ಸೌಲಭ್ಯಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಸಿದ್ಧಗೊಳಿಸಿದ್ದು ಭಾರತದ ಮೇಲೆ ದಾಳಿಗೆ ಹವಣಿಸಿರುವ ಸಂಗತಿ ಬಯಲಾಗಿದೆ. ಮಾಧ್ಯಮದ ವರದಿಯ ಪ್ರಕಾರ, ತನ್ನ ಅಣ್ವಸ್ತ್ರ ಭಂಡಾರವನ್ನು ಹೆಚ್ಚಿಸಲು ಪಾಕಿಸ್ತಾನ ಸರ್ಕಾರದ ಯತ್ನಗಳ ಬಗ್ಗೆ ಅಮೆರಿಕ ಅಣ್ವಸ್ತ್ರ ವಿಜ್ಞಾನಿಗಳು ಹೊಸ ಪುರಾವೆಯನ್ನು ಬಯಲುಮಾಡಿದ್ದಾರೆ.
ಪಾಕಿಸ್ತಾನ ತನ್ನ ವಿದಳನ ವಸ್ತು ಸಂಗ್ರಹವನ್ನು ಶಸ್ತ್ರಾಸ್ತ್ರಗಳಲ್ಲಿ ಬಳಸಲು ವಿಸ್ತರಣೆ ಮಾಡುತ್ತಿದ್ದು, ಎರಡು ಹೊಸ ಪ್ಲುಟೋನಿಯಂ ಉತ್ಪಾದನೆ ಸ್ಥಾವರಗಳನ್ನು ಮತ್ತು ಈ ಉದ್ದೇಶಕ್ಕಾಗಿ ರಾಸಾಯನಿಕ ಪ್ರತ್ಯೇಕತೆ ಸೌಲಭ್ಯವನ್ನು ನಿರ್ಮಿಸುತ್ತಿದೆ. ಅಣ್ವಸ್ತ್ರ ಸಾಮರ್ಥ್ಯದ ಖಂಡಾಂತರ ಕ್ಷಿಪಣಿ(ಶಾಹೀನ್ 2)ಯನ್ನು ಕೂಡ ಪಾಕಿಸ್ತಾನ ನಿಯೋಜನೆಗೆ ಸಿದ್ದಪಡಿಸುತ್ತಿದೆ. ಸಬ್‌ಮೆರಿನ್‌ನಿಂದ ಉಡಾಯಿಸುವ ಖಂಡಾಂತರ ಕ್ಷಿಪಣಿಯನ್ನು ಪಾಕಿಸ್ತಾನ ಅಭಿವೃದ್ಧಿಪಡಿಸುತ್ತಿದ್ದು, ನೆಲದಿಂದ ಉಡಾಯಿಸುವ ಬಾರ್ಬರ್ ಮತ್ತು ಆಕಾಶದಿಂದ ಉಡಾಯಿಸುವ ರಾಡ್ ಸೇರಿದಂತೆ ಎರಡು ಹೊಸ ಅಣ್ವಸ್ತ್ರ ಸಾಮರ್ಥ್ಯದ ಕ್ರೂಸ್ ಕ್ಷಿಪಣಿಗಳನ್ನು ಪಾಕಿಸ್ತಾನ ಅಭಿವೃದ್ಧಿಪಡಿಸುತ್ತಿದೆ.
ಆದರೆ ಅತ್ಯಂತ ಆತಂಕಕಾರಿ ಸಂಗತಿಯೆಂದರೆ, ಇಸ್ಲಾಮಾಬಾದ್ ಕ್ಷಿಪಣಿಗಳನ್ನು ಸಿಡಿತಲೆಗಳೊಂದಿಗೆ ಜೋಡಿಸಿದ ರೂಪದಲ್ಲಿ ಸಿದ್ಧವಾಗಿಟ್ಟಿರುವುದು. ಅವನ್ನು ಯಾವುದೇ ಸಂದರ್ಭದಲ್ಲಿ ತಕ್ಷಣವೇ ಬಳಸಬಹುದಾಗಿದ್ದು, ಭಾರತದ ಭದ್ರತೆಗೆ ಭಾರೀ ಬೆದರಿಕೆಯೊಡ್ಡಿದೆ. ಕರಾಚಿಯಿಂದ ಸುಮಾರು 12 ಕಿಮೀ ದೂರದಲ್ಲಿ ಮಸ್ರೂರ್ ವಾಯುಪಡೆ ನೆಲೆಯ ಬಳಿ ಪಾಕಿಸ್ತಾನಿ ಅಣ್ವಸ್ತ್ರ ಕೋಠಿಯೆಂದು ಬಹುತೇಕ ದೃಢಪಡಿಸುವ ಉಪಗ್ರಹ ಚಿತ್ರವನ್ನು ವರದಿ ಪ್ರಸ್ತಾಪಿಸಿದೆ.
ಈ ಚಿತ್ರವು ಅಣ್ವಸ್ತ್ರ ಸೌಲಭ್ಯಗಳಿಗೆ ವಿಶೇಷ ಭದ್ರತೆ ಕಲ್ಪಿಸಿರುವುದನ್ನು ಮತ್ತು ಅವುಗಳನ್ನು ಸಂಗ್ರಹಿಸುವ ಪ್ರತ್ಯೇಕ ಬಂಕರ್‌ಗಳನ್ನು ತೋರಿಸಿದೆ. ಪಾಕಿಸ್ತಾನ ತನ್ನ ಅಣ್ವಸ್ತ್ರ ಸಿಡಿತಲೆಗಳನ್ನು 60ರ ಸಂಖ್ಯೆಯಿಂದ 70-90 ಸಿಡಿತಲೆಗಳವರೆಗೆ ಹೆಚ್ಚಿಸಿದೆಯೆಂದು ಕೂಡ ಶಂಕಿಸಲಾಗಿದೆ.
ಅಣ್ವಸ್ತ್ರ ನೀತಿಯಲ್ಲಿ ಪ್ರಮುಖ ಬದಲಾವಣೆ ಮಾಡಿರುವ ಪಾಕಿಸ್ತಾನ ಯುರೇನಿಯಂ ಮೂಲದ ಸಿಡಿತಲೆ ಬದಲಿಗೆ ಪ್ಲುಟೋನಿಂಯ ಮೂಲದ ಸಿಡಿತಲೆಗಳನ್ನು ಪೂರೈಸುತ್ತಿದೆ. ಪ್ಲುಟೋನಿಯಂ ಮೂಲದ ಸಿಡಿತಲೆಗಳು ಹಗುರವಾಗಿದ್ದು, ಯುರೇನಿಯಂಗಿಂತ ಹೆಚ್ಚಿನ ವ್ಯಾಪ್ತಿ ಹೊಂದಿರುತ್ತದೆ. ಅಮೆರಿಕದ ಹಾರ್ಪೂನ್ ಕ್ಷಿಪಣಿಗಳಲ್ಲಿ ಪಾಕಿಸ್ತಾನ ಅಕ್ರಮ ಮಾರ್ಪಾಟು ಮಾಡಿರುವುದು ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ ಈ ಹೊಸ ವರದಿ ಭಾರತದ ಪಾಲಿಗೆ ಆತಂಕಕಾರಿಯಾಗಿದೆ.