ವಾಷಿಂಗ್ಟನ್, ಬುಧವಾರ, 2 ಸೆಪ್ಟೆಂಬರ್ 2009( 15:55 IST )
ಅಮೆರಿಕದಿಂದ ಖರೀದಿಸಿದ ನೌಕೆ ವಿರೋಧಿ ಕ್ಷಿಪಣಿ ಹರ್ಪೂನ್‌ನ ಅಕ್ರಮ ಆಧುನೀಕರಣದ ವಿವಾದದ ಬಗ್ಗೆ ಪರಸ್ಪರ ತಪಾಸಣೆ ನಡೆಸಲು ಪಾಕಿಸ್ತಾನ ಒಪ್ಪಿಕೊಂಡಿದೆ.
ಈ ವಿಷಯವನ್ನು ಸಾರ್ವಜನಿಕ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಪಿ.ಜೆ.ಕ್ರೌಲಿ ಮಂಗಳವಾರ ಬಹಿರಂಗಪಡಿಸಿದ್ದಾರೆ. 'ನಮ್ಮಿಂದ ಖರೀದಿಸಿದ ಕ್ಷಿಪಣಿಯನ್ನು ಭಾರತದ ಮೇಲೆ ಭೂ ದಾಳಿ ನಡೆಸಲು ಅನುಕೂಲವಾಗುವ ರೀತಿ ಪರಿವರ್ತಿಸಿಕೊಂಡಿರುವ ಪಾಕಿಸ್ತಾನದ ಕೃತ್ಯವನ್ನು ಒಬಾಮ ಆಡಳಿತ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ನಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದೇವೆ. ಅದಕ್ಕೆ ಇಸ್ಲಾಮಾಬಾದ್ ನೀಡಿರುವ ತಪಾಸಣೆಯ ಭರವಸೆಯು ನಮ್ಮ ಕಾಳಜಿಗಳಿಗೆ ತಕ್ಕಂತೆ ಇರುವುದೇ ಎಂಬುದನ್ನು ಕಾಯ್ದು ನೋಡುತ್ತೇವೆ ಎಂದು ಕ್ರೌಲಿ ಹೇಳಿದ್ದಾರೆ.
ಪಾಕಿಸ್ತಾನವು ಗುಪ್ತವಾಗಿ ಕ್ಷಿಪಣಿ ಪರೀಕ್ಷೆ ನಡೆಸಿದ ಶಂಕೆ ವ್ಯಕ್ತವಾಗಿದ್ದ ಸಂದರ್ಭದಲ್ಲಿ ಅಮೆರಿಕದ ತನಿಖಾಧಿಕಾರಿಗಳು ಏಪ್ರಿಲ್ 23ರಂದು ಉಲ್ಲಂಘನೆಯನ್ನು ಪತ್ತೆ ಹಚ್ಚಿದ್ದರು. ಈ ವಿಷಯವನ್ನು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ ಬೆನ್ನಲ್ಲೇ ಕ್ರೌಲಿ ಈ ಹೇಳಿಕೆ ಹೊರಬಿದ್ದಿದೆ.