ಕೌಲಾಲಂಪುರ, ಗುರುವಾರ, 3 ಸೆಪ್ಟೆಂಬರ್ 2009( 11:05 IST )
ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಮಲೇಶಿಯದ ಮಾಲೀಕನನ್ನು ಇರಿದು ಕೊಂದ ಭಾರತೀಯ ಮಹಿಳೆಯನ್ನು ಬುಧವಾರ ಕೋರ್ಟೊಂದು ಬಿಡುಗಡೆ ಮಾಡಿದೆ. ಮಹಿಳೆಯ ಕಾರಾಗೃಹವಾಸದ ಅವಧಿಯನ್ನು ಹೆಚ್ಚಿಸಬೇಕೆಂಬ ಪ್ರಾಸಿಕ್ಯೂಷನ್ ಕೋರಿಕೆಯನ್ನು ಕೋರ್ಟ್ ತಳ್ಳಿಹಾಕಿತು. ಇಬ್ಬರು ಮಕ್ಕಳ ತಾಯಿಯಾದ, ಪರಿಚಾರಿಕೆಯಾಗಿ ಕೆಲಸ ಮಾಡುತ್ತಿದ್ದ ಎಸ್. ಸೆಲ್ವಿ 2006ರಲ್ಲಿ ತಮ್ಮ ಮಾಲೀಕರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದು ಕಳೆದ 5 ವರ್ಷಗಳಿಂದ ಜೈಲಿನಲ್ಲಿದ್ದರು.
ಸೆಲ್ವಿಗೆ ನಾಲ್ಕು ವರ್ಷಗಳ ಶಿಕ್ಷೆ ವಿಧಿಸಿದ ಸ್ಥಳೀಯ ಹೈಕೋರ್ಟ್ ನಿರ್ಧಾರವನ್ನು ಕೋರ್ಟ್ ಎತ್ತಿಹಿಡಿದಿದ್ದು, ಶಿಕ್ಷೆಯ ಅವಧಿ ಪೂರೈಸಿದ್ದರಿಂದ ಅವರ ಬಿಡುಗಡೆಗೆ ಆದೇಶ ನೀಡಿದೆ. ತೀರ್ಪನ್ನು ಕೇಳಿ ಅಶ್ರುಧಾರೆ ಹರಿಸಿದ 40 ವರ್ಷ ವಯಸ್ಸಿನ ಸೆಲ್ವಿ ನ್ಯಾಯಾಧೀಶರಿಗೆ ಧನ್ಯವಾದ ಅರ್ಪಿಸಿದರು. ಸೆಲ್ವಿ ತಮ್ಮ ಬಾಡಿಗೆಮನೆಯಲ್ಲಿ ಜಿ. ರಾಜಂ ಎಂಬ ಮಾಲೀಕರನ್ನು ಹತ್ಯೆ ಮಾಡಿದ ಆರೋಪವನ್ನು ಹೊರಿಸಲಾಗಿತ್ತು.
ಮೂರು ವರ್ಷಗಳ ಬಳಿಕ ಪ್ರಾಸಿಕ್ಯೂಷನ್ ಸೆಲ್ವಿ ಮೇಲಿನ ಆರೋಪವನ್ನು ದುರುದ್ದೇಶವಲ್ಲದ ಮಾನವ ಹತ್ಯೆಯೆಂದು ತಿದ್ದುಪಡಿಮಾಡಿತು. 2006 ಮೇ 8ರಂದು ಸೆಲ್ವಿಗೆ ಕೋರ್ಟ್ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತು ಮತ್ತು 2003 ನ.3ರಂದು ಬಂಧಿಸಿದ ದಿನದಿಂದ ಶಿಕ್ಷೆಯ ಅವಧಿಯನ್ನು ಪೂರೈಸುವಂತೆ ಆದೇಶಿಸಲಾಯಿತು. ಆದರೆ ಅಪೀಲು ಕೋರ್ಟ್‌ಗೆ ಶಿಕ್ಷೆಯ ಅವಧಿಯನ್ನು ವಿಸ್ತರಿಸುವಂತೆ ಪ್ರಾಸಿಕ್ಯೂಷನ್ ಮನವಿ ಸಲ್ಲಿಸಿದ್ದರಿಂದ ಸೆಲ್ವಿಯ ಶಿಕ್ಷೆಯ ಅವಧಿ ಮುಗಿದಿದ್ದರೂ ಬಂಧನದಲ್ಲಿ ಇರಿಸಲಾಗಿತ್ತು.
ಬುಧವಾರ ಬೆಳಿಗ್ಗೆ ಮೂವರು ಸದಸ್ಯರ ನ್ಯಾಯಪೀಠವು ಆಕೆಯ ಶಿಕ್ಷೆಯ ಅವಧಿಯನ್ನು ಹೆಚ್ಚಿಸಬೇಕೆಂಬ ಮನವಿಯನ್ನು ತಳ್ಳಿಹಾಕಿ ಸೆಲ್ವಿಯನ್ನು ಬಿಡುಗಡೆ ಮಾಡಿದೆ.ಸೆಲ್ವಿಯ ಮಾಲೀಕ ರಾಜಾಮ್ ಲೈಂಗಿಕ ದುರ್ವರ್ತನೆಗೆ ಯತ್ನಿಸಿದಾಗ ಆತ್ಮರಕ್ಷಣೆ ಸಲುವಾಗಿ ಸೆಲ್ವಿ ಚೂರಿಯಿಂದ ಇರಿದಿದ್ದಾರೆಂದು ಅವರ ಪರ ವಕೀಲ ವಾದಿಸಿದ್ದರು.