ಇಸ್ಲಾಮಾಬಾದ್, ಗುರುವಾರ, 3 ಸೆಪ್ಟೆಂಬರ್ 2009( 12:23 IST )
ದೇಶದ್ರೋಹದ ಆರೋಪದ ಮೇಲೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು ವಿಚಾರಣೆಗೆ ಗುರಿಪಡಿಸುವ ಯಾವುದೇ ಕ್ರಮದ ವಿರುದ್ಧ ಸೌದಿ ರಾಜಕುಟುಂಬ ಮಧ್ಯಪ್ರವೇಶ ಮಾಡಿರಬಹುದು ಎಂಬ ಊಹಾಪೋಹ ರಾಜಕೀಯ ವಲಯಗಳಲ್ಲಿ ದಟ್ಟವಾಗಿ ಹರಡಿದೆ. ಸೌದಿ ಅರೇಬಿಯಕ್ಕೆ ಒಳಾಡಳಿತ ಸಚಿವ ರೆಹ್ಮಾನ್ ಮಲಿಕ್ ಅವರು ಆಗಿಂದಾಗ್ಗೆ ಭೇಟಿ ಕೊಟ್ಟಿದ್ದರಿಂದ ಮುಷರಫ್ ರಕ್ಷಣೆಗೆ ಸೌದಿ ರಾಜಮನೆತನ ಪ್ರಯತ್ನಿಸುತ್ತಿದೆಯೆಂಬ ವದಂತಿ ದಟ್ಟವಾಗಿ ಹರಡಿದೆ.
ಮುಷರಫ್ ಅವರು ಸೌದಿ ರಾಜಮನೆತನದ ಅತಿಥಿಯಾಗಿ ರಾಜಧಾನಿಯಲ್ಲೇ ತಂಗಿದ್ದಾರೆ. ಮುಷರಫ್ ಮತ್ತು ಸೌದಿ ದೊರೆ ಅಬ್ದುಲ್ಲಾ ಬಿನ್ ಅಬ್ದುಲ್ಲಾ ಅಜೀಝ್ ನಡುವೆ ಮಂಗಳವಾರದ ಭೇಟಿ ಸುಮಾರು 3 ಗಂಟೆಗಳ ಕಾಲ ನಡೆಯಿತು. ಸೌದಿ ಅರೇಬಿಯಕ್ಕೆ ಭೇಟಿ ನೀಡಿದ್ದ ಮಲಿಕ್ ಸಹ ದೊರೆಯನ್ನು ಭೇಟಿಯಾಗಿದ್ದರು.
ಮುಷರಫ್ ಅವರು ರಾಜ ಅಬ್ದುಲ್ಲಾ ಒದಗಿಸಿದ್ದ ವಿಶೇಷ ಜೆಟ್ ವಿಮಾನದಲ್ಲಿ ಬ್ರಿಟನ್‌ನಿಂದ ಸೌದಿ ಅರೇಬಿಯಕ್ಕೆ ತೆರಳಿದ್ದರು. ಸೌದಿ ತೆಗೆದುಕೊಂಡಿರುವ ನಿಲುವಿನಿಂದ ಮುಷರಫ್ ವಿರುದ್ಧ ದೇಶದ್ರೋಹದ ಆರೋಪದ ಮೇಲೆ ವಿಚಾರಣೆ ನಡೆಸಬೇಕೆಂಬ ಪಿಎಂಎಲ್-ಎನ್ ಮುಖಂಡ ನವಾಜ್ ಷರೀಫ್ ಅವರು ತಮ್ಮ ಒತ್ತಾಯವನ್ನು ಕೈಬಿಡುವಂತೆ ಪ್ರಭಾವ ಬೀರಲು ಯತ್ನಿಸುತ್ತಿದೆಯೆಂದು ತಿಳಿದುಬಂದಿರುವುದಾಗಿ ಡಾನ್ ಸುದ್ದಿಪತ್ರಿಕೆ ವರದಿ ಮಾಡಿದೆ.