ಹೆಲಿಕಾಪ್ಟರ್ ಅಪಘಾತದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್‌ಆರ್ ರೆಡ್ಡಿ ಮತ್ತು ಇನ್ನೂ ನಾಲ್ವರು ಮೃತಪಟ್ಟಿರುವ ದುರ್ಘಟನೆ ಬಗ್ಗೆ ಅಮೆರಿಕ ಗುರುವಾರ ಸಂತಾಪ ವ್ಯಕ್ತಪಡಿಸಿದೆ.
ರಾಜಶೇಖರ ರೆಡ್ಡಿ ಅಮೆರಿಕ-ಭಾರತ ಸ್ನೇಹದ ಮತ್ತು ದ್ವಿಪಕ್ಷೀಯ ಪಾಲುದಾರಿಕೆಯ ದೃಢ ಬೆಂಬಲಿಗರಾಗಿದ್ದರೆಂಬುದು ಆಂಧ್ರಪ್ರದೇಶದ ಜನರು ಮತ್ತು ಅಮೆರಿಕದ ಜನರ ನಡುವೆ ದೃಢವಾದ ಆರ್ಥಿಕ ಮತ್ತು ಕೌಟುಂಬಿಕ ಬಾಂಧವ್ಯದಲ್ಲಿ ಗೋಚರವಾಗುತ್ತದೆಂದು ರೆಡ್ಡಿ ಅವರಿಗೆ ಗೌರವ ಅರ್ಪಿಸುತ್ತಾ, ಅಮೆರಿಕ ರಾಯಭಾರಿ ತಿಮೋತಿ ಜೆ ರೊಯಿಮರ್ ತಿಳಿಸಿದ್ದಾರೆ.
ಅಮೆರಿಕ ಸರ್ಕಾರದ ಪರವಾಗಿ ರೆಡ್ಡಿ ಕುಟುಂಬಕ್ಕೆ ಮತ್ತು ಮೃತಪಟ್ಟ ಇನ್ನಿತರ ಕುಟುಂಬಗಳಿಗೆ ತಮ್ಮ ಸಂತಾಪವನ್ನು ಸೂಚಿಸುವುದಾಗಿ ರೋಯಿಮರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೆಲಿಕಾಪ್ಟರ್ ಅಪಘಾತದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ರೆಡ್ಡಿ ಸಮೇತ ಅವರ ವಿಶೇಷ ಕಾರ್ಯದರ್ಶಿ ಪಿ. ಸುಬ್ರಮಣ್ಯಂ, ಮುಖ್ಯ ಭದ್ರತಾ ಅಧಿಕಾರಿ ಎ.ಎಸ್.ಸಿ. ವೆಸ್ಲಿ, ಪೈಲಟ್ ಗ್ರೂಪ್ ಕ್ಯಾಪ್ಟನ್ ಎಸ್.ಕೆ. ಭಾಟಿಯಾ ಮತ್ತು ಸಹಪೈಲಟ್ ಎಂ.ಎಸ್. ರೆಡ್ಡಿ ಮೃತಪಟ್ಟಿದ್ದಾರೆ.