ಭಾರತ ಹೆಚ್ಚುವರಿ ಅಣ್ವಸ್ತ್ರ ಪರೀಕ್ಷೆಗಳಿಗೆ ಸಿದ್ಧಗೊಳ್ಳುತ್ತಿದೆಯೆಂಬ ವರದಿಗಳಿಂದ ಆತಂಕಿತರಾಗಿರುವುದಾಗಿ ಪಾಕಿಸ್ತಾನ ಗುರುವಾರ ತಿಳಿಸಿದ್ದು, ಅಣ್ವಸ್ತ್ರ ಪರೀಕ್ಷೆಯ ಬಗ್ಗೆ ಏಕಪಕ್ಷೀಯ ಸ್ವಯಂನಿಯಂತ್ರಣವು ಇನ್ನೂ ಚಾಲ್ತಿಯಲ್ಲಿದೆಯೆಂದು ಆಶಿಸುವುದಾಗಿ ಹೇಳಿದೆ.
ಭಾರತ ಹೆಚ್ಚುವರಿ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಲು ಪರಿಶೀಲನೆ ನಡೆಸುತ್ತಿದೆಯೆಂಬ ಮಾಧ್ಯಮದ ವರದಿಗಳಿಂದ ನಾವು ಕಳವಳ ಪಟ್ಟಿದ್ದೇವೆ ಎಂದು ವಿದೇಶಾಂಗ ಕಚೇರಿ ವಕ್ತಾರ ಅಬ್ದುಲ್ ಬಸಿತ್ ವಾರಪತ್ರಿಕೆಯೊಂದಕ್ಕೆ ಪತ್ರಿಕಾ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನವು ತನ್ನ ಅಣ್ವಸ್ತ್ರ ಸಾಮರ್ಥ್ಯ ಹೆಚ್ಚಿಸುತ್ತಿರುವ ವರದಿಗಳ ಬಗ್ಗೆ ಭಾರತದ ಸೇನಾ ಮುಖ್ಯಸ್ಥ ದೀಪಕ್ ಕಪೂರ್ ವ್ಯಕ್ತಪಡಿಸಿದ ಆತಂಕಗಳನ್ನು ಕುರಿತು ಬಸೀತ್ ಉತ್ತರಿಸುತ್ತಿದ್ದರು.ಪಾಕಿಸ್ತಾನವು ಬಹಿರಂಗವಾಗಿ ನಮ್ಮ ಸ್ವಯಂರಕ್ಷಣೆಯ ಸ್ವರೂಪವನ್ನು ಚರ್ಚಿಸುವುದಿಲ್ಲ. ಆದರೆ ಕನಿಷ್ಠ ಮಟ್ಟಗಳಲ್ಲಿ ವಿಶ್ವಾಸಾರ್ಹ ಸ್ವಯಂರಕ್ಷಣೆ ಕಾಯ್ದುಕೊಳ್ಳಲು ಪಾಕಿಸ್ತಾನ ಬದ್ಧವಾಗಿದೆಯೆಂದು ಅವರು ತಿಳಿಸಿದರು.
ದಕ್ಷಿಣ ಏಷ್ಯಾದಲ್ಲಿ ಯಾವುದೇ ಶಸ್ತ್ರಾಸ್ತ್ರ ಪೈಪೋಟಿಯನ್ನು ಪಾಕಿಸ್ತಾನ ವಿರೋಧಿಸುತ್ತದೆಂದು ಅವರು ನುಡಿದರು. 1998ರಲ್ಲಿ ಭಾರತದ ಅಣ್ವಸ್ತ್ರ ಪರೀಕ್ಷೆ ಹೇಳಿಕೊಳ್ಳುವಷ್ಟು ಯಶಸ್ವಿಯಾಗಿರಲಿಲ್ಲವೆಂದು ಭಾರತದ ಪ್ರಮುಖ ರಕ್ಷಣಾ ವಿಜ್ಞಾನಿ ಕೆ. ಸಂತಾನಂ ಪ್ರತಿಕ್ರಿಯೆಯಿಂದ ಭಾರತ ತನ್ನ ಅಣ್ವಸ್ತ್ರಗಳ ವಿನ್ಯಾಸ ದೃಢೀಕರಿಸಲು ಮತ್ತಷ್ಟು ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದೆಯೆಂಬ ಊಹಾಪೋಹಗಳು ಭುಗಿಲೆದ್ದಿವೆ. ಆದರೆ ಸಂತಾನಮ್ ಹೇಳಿಕೆಯನ್ನು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅಲ್ಲಗಳೆದಿದ್ದಾರೆ.