ಕಳೆದ ವರ್ಷ ಡಿಸೆಂಬರ್‌ನಲ್ಲಿ ನಿಷೇಧಿತ ಲಷ್ಕರೆ ತೊಯ್ಬಾದ ಅಂಗವೆಂದು ವಿಶ್ವಸಂಸ್ಥೆ ಭದ್ರತಾಮಂಡಳಿ ಘೋಷಿಸಿದಾಗಿನಿಂದ ಜೈಲಿನಲ್ಲಿದ್ದ ಜಮಾತ್ ಉದ್ ದವಾದ 11 ಕಾರ್ಯಕರ್ತರಿಗೆ ಪಾಕಿಸ್ತಾನ ಕೋರ್ಟ್ ಜಾಮೀನು ನೀಡಿದೆ. ಮುಖ್ಯನ್ಯಾಯಮೂರ್ತಿ ಖ್ವಾಜಾ ಮುಹಮದ್ ಷರೀಫ್ ನೇತೃತ್ವದ ಲಾಹೋರ್ ಹೈಕೋರ್ಟ್ ವಿಭಾಗೀಯ ಪೀಠವು ಜೆಯುಡಿ ಕಾರ್ಯಕರ್ತರಿಗೆ ಜಾಮೀನನ್ನು ನೀಡಿದೆ.
ಜೆಯುಡಿ ನಿಷೇಧಿತ ಸಂಘಟನೆಯೆಂದು ವಾದಿಸಿದ ಡೆಪ್ಯೂಟಿ ಪ್ರಾಸಿಕ್ಯೂಟರ್ ಜನರಲ್ ಚೌಧರಿ ಜಮ್ಶೇಡ್ ಜಾಮೀನು ನೀಡಿಕೆಯನ್ನು ವಿರೋಧಿಸಿದರು.ಜೆಯುಡಿ ಕಾರ್ಯಕರ್ತರು ಹಣಕಾಸು ಸಂಗ್ರಹಣೆ, ಧಾರ್ಮಿಕ ಸಾಹಿತ್ಯ ವಿತರಣೆ ಮತ್ತಿತರ ಚಟುವಟಿಕೆಗಳನ್ನು ಫೆಡರಲ್ ಸರ್ಕಾರ ನಿಷೇಧ ವಿಧಿಸಿದ ಮೇಲೆಯೂ ಮುಂದುವರಿಸಿದೆಯೆಂದು ಜಮ್ಶೇಡ್ ತಿಳಿಸಿದರು.
ಆದರೆ ಸಂಘಟನೆಯ ನಿಷೇಧ ಕುರಿತಂತೆ ಯಾವುದೇ ಔಪಚಾರಿಕ ಪ್ರಕಟಣೆಯಿಲ್ಲವೆಂದು ಜೆಯುಡಿ ಕಾರ್ಯಕರ್ತರ ಪರ ವಕೀಲ ಇರ್ಷಾದುಲ್ಲಾ ಚಾಟಾ ವಾದಿಸಿದರು. ಪ್ರಕಟಣೆ ನೀಡುವ ತನಕ ಯಾವುದೇ ಸಂಘಟನೆಯನ್ನು ನಿಷೇಧಿಸುವಂತಿಲ್ಲವೆಂದು ಅವರು ವಾದ ಮಂಡಿಸಿದರು. ಜೆಯುಡಿ ಮುಖ್ಯಸ್ಥ ಹಪೀಝ್ ಮಹಮದ್ ಸಯೀದ್‌ಗೆ ಸಂಬಂಧಿಸಿದ ಮುಂಚಿನ ಪ್ರಕರಣದಲ್ಲಿಯೂ ಸಂಘಟನೆಯ ವಿರುದ್ಧ ಯಾವುದೇ ಸಮರ್ಥನೀಯ ಸಾಕ್ಷ್ಯವಿಲ್ಲವೆಂದು ಲಾಹೋರ್ ಹೈಕೋರ್ಟ್‌ನಲ್ಲಿ ಫೆಡರಲ್ ಸರ್ಕಾರ ಒಪ್ಪಿಕೊಂಡಿದೆ.