ಇಂಡೊನೇಶಿಯ, ಗುರುವಾರ, 3 ಸೆಪ್ಟೆಂಬರ್ 2009( 18:17 IST )
ಇಂಡೊನೇಶಿಯ ಜಾವಾ ದ್ವೀಪದಲ್ಲಿ ಸಂಭವಿಸಿದ ಭೂಕಂಪದಿಂದ ಕುಸಿದುಬಿದ್ದ ಕಟ್ಟಡಗಳು ಮತ್ತು ಮನೆಗಳ ಅವಶೇಷಗಳಡಿ ಅನೇಕ ನಿವಾಸಿಗಳು ಸಿಕ್ಕಿಬಿದ್ದಿದ್ದಾರೆಂದು ವರದಿಯಾಗಿದೆ. ಕನಿಷ್ಠ 46 ಜನರು ಭೂಕಂಪದಿಂದ ಹತರಾಗಿದ್ದಾರೆಂದು ಅಧಿಕಾರಿಗಳು ವರದಿ ಮಾಡಿದ್ದಾರೆ.
ಸಿಯಾಂಜುರ್ ಜಿಲ್ಲೆಯ ದಕ್ಷಿಣಕ್ಕೆ ಕುಸಿದ ಮನೆಗಳು ಮತ್ತು ಕಟ್ಟಡಗಳ ಅವಶೇಷಗಳಲ್ಲಿ ಸಿಕ್ಕಿಬಿದ್ದ ಜನರ ಶೋಧಕ್ಕೆ ಪೊಲೀಸರು ಮತ್ತು ಸೈನಿಕರಿಗೆ ಕರೆಕಳುಹಿಸಲಾಗಿದೆ. ಸಿಯಾಂಜುರ್‌ನಲ್ಲಿ 46 ಜನರು ಸತ್ತಿದ್ದಾರೆ ಮತ್ತು ಇನ್ನೂ 42 ಜನರು ಅವಶೇಷಗಳಲ್ಲಿ ಹೂತುಹೋಗಿದ್ದಾರೆ. ಅವರು ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆಯೆಂದು ಹಾನಿ ನಿರ್ವಹಣೆ ಏಜನ್ಸಿಯ ವಕ್ತಾರ ತಿಳಿಸಿದ್ದಾರೆ. ಜಕಾರ್ತದಲ್ಲಿ ಕೂಡ ಭೂಕಂಪದ ತೀವ್ರ ಅನುಭವವಾಗಿದೆ.
ಗಾಬರಿಯಾದ ನಿವಾಸಿಗಳು ಕಚೇರಿ ಟವರ್‌ಗಳಿಂದ, ಶಾಪಿಂಗ್ ಮಾಲ್‌ಗಳಿಂದ ಮತ್ತು ಮನೆಗಳಿಂದ ಹೊರಕ್ಕೆ ಓಡಿದರು. ಇಂಡೊನೇಶಿಯದ ಹವಾಮಾನ ಮತ್ತು ಭೂಭೌತ ಏಜೆನ್ಸಿ ಸುನಾಮಿ ಮುನ್ನೆಚ್ಚರಿಕೆಯನ್ನು ಮೊದಲಿಗೆ ನೀಡಿದ್ದರೂ, ಯಾವುದೇ ಅಪಾಯವಿಲ್ಲವೆಂದು ಮನಗಂಡ ಬಳಿಕ ಹಿಂತೆಗೆದುಕೊಂಡಿತ್ತು.
ಬುಧವಾರ ಜಾವಾದ ದಕ್ಷಿಣ ತೀರದಲ್ಲಿ ಅಪ್ಪಳಿಸಿದ ಭೂಕಂಪದಿಂದ ಪಶ್ಚಿಮ ಜಾವಾ ಪ್ರಾಂತ್ಯದ ಸಿಯಾಂಜುರ್, ಗಾರುಟ್ ಮತ್ತುತಾಸಿಕ್‌ಮಲಯದ ಜಿಲ್ಲೆಗಳಲ್ಲಿ ತೀವ್ರ ಹಾನಿಯಾಗಿದೆಯೆಂದು ಅಧಿಕಾರಿಗಳು ಹೇಳಿದ್ದಾರೆ.