ವಾಷಿಂಗ್ಟನ್, ಶುಕ್ರವಾರ, 4 ಸೆಪ್ಟೆಂಬರ್ 2009( 10:32 IST )
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರು ಜನಸಾಮಾನ್ಯರ ವ್ಯಕ್ತಿ ಎಂದು ಅವರ ದುರಂತಮಯ ಸಾವಿಗೆ ಸಂತಾಪ ಸೂಚಿಸುತ್ತಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಮೆರಿಕ ಸಂಘ ತಿಳಿಸಿದೆ. ಜನಸಾಮಾನ್ಯರ ನಾಡಿಮಿಡಿತ ಅರಿತಿದ್ದ ಜನತಾ ವ್ಯಕ್ತಿಯೆಂದು ಐಎನ್‌ಒಸಿ ಪ್ರಧಾನ ಕಾರ್ಯದರ್ಶಿ ಜಾರ್ಜ್ ಅಬ್ರಹಾಂ ಶ್ಲಾಘಿಸಿದ್ದಾರೆ.
ಆಂಧ್ರಪ್ರದೇಶದ ಗ್ರಾಮೀಣಾಭಿವೃದ್ಧಿಗೆ ಅವರ ಕೊಡುಗೆ ಮರೆಯಲಸಾಧ್ಯ ಎಂದು ಮುಖ್ಯಮಂತ್ರಿ ಮತ್ತು ಇನ್ನೂ ನಾಲ್ವರ ಕುಟುಂಬಗಳಿಗೆ ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ಅವರು ತಿಳಿಸಿದ್ದಾರೆ. ರೆಡ್ಡಿ ರಾಷ್ಟ್ರದ ಅತ್ಯಂತ ಪರಿಮಾಣಕಾರಿ ಮುಖ್ಯಮಂತ್ರಿಗಳಲ್ಲಿ ಒಬ್ಬರು ಎಂದು ಐಎನ್‌ಒಸಿ ಅಧ್ಯಕ್ಷ ಸುರೀಂದರ್ ಮಲ್ಹೋತ್ರಾ ತಿಳಿಸಿದರು. ಕಳೆದ ಚುನಾವಣೆಯಲ್ಲಿ ಪಕ್ಷದ ಜಯಕ್ಕೆ ಅವರ ಕೊಡುಗೆ ಅಪಾರವೆಂದು ಬಣ್ಣಿಸಿದರು.
ರಾಜ್ಯದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಅವರ ಬದ್ಧತೆ ಮತ್ತು ಸಮಗ್ರ ಅಭಿವೃದ್ಧಿಗೆ ಸ್ಥಿರ ರಾಜಕೀಯ ಪರಿಸರ ಒದಗಿಸಿದ ಅವರ ಬದ್ಧತೆಗಾಗಿ ಚಿರಕಾಲ ನೆನಪಿನಲ್ಲಿ ಉಳಿಯುತ್ತದೆಂದು ಮಲ್ಹೋತ್ರಾ ಹೇಳಿದ್ದಾರೆ. ರೆಡ್ಡಿ ಅವರು ಅಕಾಲಿಕ ಮರಣದಿಂದ ಭಾರತಕ್ಕೆ ವಿಶೇಷವಾಗಿ ಕಾಂಗ್ರೆಸ್‌ಪಕ್ಷಕ್ಕೆ ಅಪಾರ ನಷ್ಟವುಂಟಾಗಿದೆಯೆಂದು ಅವರು ಹೇಳಿದ್ದಾರೆ.