ಪಾಕಿಸ್ತಾನವು ಎ.ಕ್ಯೂ.ಖಾನ್ ಅವರ ಚಲನವಲನಕ್ಕೆ ಪುನ: ನಿರ್ಬಂಧಗಳನ್ನು ಹೇರಿದ್ದರೂ, ಕಳಂಕಿತ ಪರಮಾಣು ವಿಜ್ಞಾನಿ ಅಣ್ವಸ್ತ್ರ ಪ್ರಸರಣದ ಅಪಾಯಕಾರಿ ವ್ಯಕ್ತಿಯಾಗಿ ಉಳಿದಿದ್ದಾರೆಂದು ಅಮೆರಿಕ ಶುಕ್ರವಾರ ತಿಳಿಸಿದೆ. ಖಾನ್ ಅವರ ಮುಕ್ತ ಚಲನವಲನದಿಂದ ನಾವು ಆತಂಕಿತರಾಗಿದ್ದು, ಪರಿಸ್ಥಿತಿ ಕುರಿತು ಸ್ಪಷ್ಟನೆಗೆ ಪಾಕ್ ಸರ್ಕಾರದ ಜತೆ ನಾವು ಚರ್ಚೆ ನಡೆಸಿದ್ದೇವೆ ಎಂದು ಸಾರ್ವಜನಿಕ ವ್ಯವಹಾರಗಳ ವಿದೇಶಾಂಗ ಸಹಾಯಕ ಕಾರ್ಯದರ್ಶಿ ಪಿ.ಜೆ.ಕ್ರೌಲಿ ತಿಳಿಸಿದ್ದಾರೆ.
ಖಾನ್ ವಿರುದ್ಧ ನಿರ್ಬಂಧಗಳ ಮರುಹೇರಿಕೆಯನ್ನು ಪಾಕಿಸ್ತಾನ ಕೋರ್ಟ್ ವಿಧಿಸಿದ್ದರಿಂದ ಪ್ರಶ್ನೆಯೊಂದಕ್ಕೆ ಕ್ರೌಲಿ ಉತ್ತರಿಸುತ್ತಿದ್ದರು.ಖಾನ್ ವಿರುದ್ಧ ಮತ್ತು ಅವರ ಪ್ರಸರಣಕಾರರ ಜಾಲದ ವಿರುದ್ಧ ದಿಗ್ಬಂಧನ ವಿಧಿಸಿದ ಅಮೆರಿಕ, ಮುಷರಫ್ ಆಡಳಿತಾವಧಿಯಲ್ಲಿ ಖಾನ್‌ಗೆ ಗೃಹಬಂಧನ ಹೇರಿದಂತೆ ಪಾಕಿಸ್ತಾನದ ಅಣ್ವಸ್ತ್ರ ವಿಜ್ಞಾನಿಯನ್ನು ಗೃಹಬಂಧನದಲ್ಲಿ ಇರಿಸಬೇಕೆಂದು ಒತ್ತಾಯಿಸಿದೆ.
ಆದರೆ ಖಾನ್‌ರನ್ನು ಗೃಹಬಂಧನದಲ್ಲಿ ಇರಿಸುವ ಅಗತ್ಯವಿಲ್ಲವೆಂದು ಪಾಕಿಸ್ತಾನ ಕೋರ್ಟೊಂದು ತೀರ್ಪು ನೀಡಿದ್ದರಿಂದ ಅವರನ್ನು ಗೃಹಬಂಧನದಿಂದ ಬಿಡುಗಡೆ ಮಾಡಿದೆ. ಖಾನ್ ಅವರನ್ನು ಬಿಡುಗಡೆ ಮಾಡಿದ್ದರಿಂದ ಅಣ್ವಸ್ತ್ರ ತಂತ್ರಜ್ಞಾನವನ್ನು ಇತರೆ ದೇಶಗಳಿಗೆ ಮಾರಾಟ ಮಾಡಿದ ಅಪಖ್ಯಾತಿ ಹೊಂದಿರುವ ಖಾನ್, ಈಗಲೂ ಅಪಾಯಕಾರಿಯಾಗಿ ಉಳಿದಿದ್ದಾರೆಂದು ಅಮೆರಿಕ ಭಾವಿಸಿದೆ.
ಅಣ್ವಸ್ತ್ರ ತಂತ್ರಜ್ಞಾನದ ತಜ್ಞತೆಯನ್ನು ಉತ್ತರ ಕೊರಿಯ ಮುಂತಾದ ರಾಷ್ಟ್ರಗಳ ಜತೆ ಹಂಚಿಕೊಂಡಿದ್ದಾರೆಂದು ಖಾನ್ ವಿರುದ್ಧ ಆರೋಪ ಹೊರಿಸಿದ ಬಳಿಕ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು.