ಕ್ಯಾಲಿಫೋರ್ನಿಯ, ಶುಕ್ರವಾರ, 4 ಸೆಪ್ಟೆಂಬರ್ 2009( 11:58 IST )
ಖ್ಯಾತ ಪಾಪ್ ತಾರೆ ಮೈಕೆಲ್ ಜಾಕ್ಸನ್ ಅವರ ಅಂತ್ಯಕ್ರಿಯೆಯು ಗುರುವಾರ ರಾತ್ರಿ ಲಾಸ್ ಏಂಜಲ್ಸ್ ಬಳಿ ನಿಗದಿತ ವೇಳೆಗಿಂತ ಒಂದು ಗಂಟೆ ತಡವಾಗಿ ಆರಂಭವಾಯಿತು. ಕ್ಯಾಲಿಫೋರ್ನಿಯದ ಗ್ಲೆಂಡೇಲ್‌ನಲ್ಲಿರುವ ಫಾರೆಸ್ಟ್ ಲಾನ್ ಸಮಾಧಿಸ್ಥಳಕ್ಕೆ 30 ಲಿಮೋಸಿನ್ ಮತ್ತು ಕಾರುಗಳ ಮೆರವಣಿಗೆಯಲ್ಲಿ ಕೆಲವರು ರಸ್ತೆಯ ಇಕ್ಕೆಲಗಳಲ್ಲಿ ನೆರದಿದ್ದ ಸಾವಿರಾರು ಅಭಿಮಾನಿಗಳ ಗುಂಪಿನತ್ತ ಕೈಬೀಸುತ್ತಿದ್ದರು.
ಅಂತ್ಯಸಂಸ್ಕಾರದ ಕ್ರಿಯಾವಿಧಿಯು ಒಂದು ಗಂಟೆ ಕಾಲ ನಡೆಯಲಿದೆಯೆಂದು ಗ್ಲೆಂಡೇಲ್ ಪೊಲೀಸ್ ಇಲಾಖೆಯ ವಕ್ತಾರ ತಿಳಿಸಿದರು. ಬಿಗಿ ಭದ್ರತೆಯ ಕಾರ್ಯಾಚರಣೆ ಅಭಿಮಾನಿಗಳನ್ನು, ವರದಿಗಾರರನ್ನು ಮತ್ತು ವಿಮಾನವನ್ನು ಕೂಡ ಸಮಾಧಿಸ್ಥಳದಿಂದ ದೂರವಿಟ್ಟಿತು.
ಜಾಕ್ಸನ್ ಅವರನ್ನು ಹಾಲಿವುಡ್ ಕಣ್ಮಣಿಗಳಾದ ವಾಲ್ಟ್ ಡಿಸ್ನಿ ಮತ್ತು ಹಂಫ್ರಿ ಬೊಗಾರ್ಟ್ ಮುಂತಾದ ಖ್ಯಾತನಾಮರ ಸಮಾಧಿಗಳ ಬಳಿಯೇ ಹೂಳಲಾಗುವುದು. ಸಮಾಧಿ ಸ್ಥಳದ ಬಳಿ ಯಾರೂ ಸುಳಿಯದಂತೆ 290 ಎಕರೆ ಸಮಾಧಿಸ್ಥಳದಲ್ಲಿ ಇನ್ಫ್ರಾರೆಡ್ ತಂತ್ರಜ್ಞಾನದ ಪೊಲೀಸ್ ಹೆಲಿಕಾಪ್ಟರ್‌ಗಳು ನಿಗಾವಹಿಸಿದ್ದವು. ಪೊಲೀಸ್ ಶ್ವಾನಗಳು, ಸಾಮಾನ್ಯ ಉಡುಪಿನ ಅಧಿಕಾರಿಗಳು ಮತ್ತು ಖಾಸಗಿ ಭದ್ರತಾ ಕಾವಲುಗಾರರು ಈ ಪ್ರದೇಶದಲ್ಲಿ ಗಸ್ತು ತಿರುಗಿದರು.