ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಕುಳಿತಿದ್ದ,ಎಮೈರೇಟ್ಸ್‌ನಿಂದ ದೆಹಲಿಯತ್ತ ತೆರಳುತ್ತಿದ್ದ ವಿಮಾನವನ್ನು ದೆಹಲಿಯಲ್ಲಿ ವೈಪರೀತ್ಯ ಹವಾಮಾನದ ಹಿನ್ನೆಲೆಯಲ್ಲಿ ಕರಾಚಿಗೆ ತಿರುಗಿಸಲಾಗಿದೆಯೆಂದು ಏರ್‌ಲೈನ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರಿಂದಾಗಿ ವಿಮಾನದ ಪ್ರಯಾಣಿಕರು ಕೆಲವು ಕ್ಷಣ ಆತಂಕದ ಕ್ಷಣಗಳನ್ನು ಎದುರಿಸಿದರು. ಆಂಧ್ರ ಮುಖ್ಯಮಂತ್ರಿ ವೈಎಸ್‌ಆರ್ ಹೆಲಿಕಾಪ್ಟರ್ ಅಪಘಾತದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಮತ್ತು ವಿಮಾನಗಳ ಪ್ರಯಾಣ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಉದ್ಭವಿಸಿದೆ. ದುಬೈನಿಂದ 3.40ಕ್ಕೆ ತೆರಳಿದ ಫ್ಲೈಟ್ ಇಕೆ-514 ಡಿಎಕ್ಸ್‌ಬಿ-ಡಿಇಎಲ್ ವಿಮಾನ ನವದೆಹಲಿಯಲ್ಲಿ ಇಳಿಯಬೇಕಾಗಿತ್ತು.
ಆದರೆ ಕೆಟ್ಟ ಹವಾಮಾನದಿಂದಾಗಿ ಕರಾಚಿಗೆ ತಿರುಗಿಸಲಾಯಿತು ಎಂದು ಎಮೈರೇಟ್ಸ್ ವಕ್ತಾರ ಗುರುವಾರ ರಾತ್ರಿ ಮಾಧ್ಯಮಕ್ಕೆ ತಿಳಿಸಿದರು. ಕರಾಚಿ ವಿಮಾನನಿಲ್ದಾಣದಲ್ಲಿ ಇಂಧನ ತುಂಬಿದ ಬಳಿಕ ಪುನಃ ದುಬೈಗೆ ವಾಪಸು ಕಳಿಸಲಾಯಿತೆಂದು ವಕ್ತಾರ ತಿಳಿಸಿದ್ದಾರೆ. ವಿಮಾನವು ರಾತ್ರಿ 11.30ಕ್ಕೆ ದುಬೈಯನ್ನು ತಲುಪುವ ನಿರೀಕ್ಷೆಯಿದೆ. ಇದಕ್ಕೆ ಮುನ್ನ, ವಿಮಾನಕ್ಕೆ ನವದೆಹಲಿಯಲ್ಲಿ ಕೆಟ್ಟ ಹವಾಮಾನದಿಂದಾಗಿ ಭೂಸ್ಪರ್ಷಕ್ಕೆ ಅನುಮತಿ ನೀಡಿರಲಿಲ್ಲ. ಇದರ ಫಲವಾಗಿ ಕರಾಚಿಯಲ್ಲಿ ವಿಮಾನ ತುರ್ತು ಭೂಸ್ಪರ್ಷ ಮಾಡಿದೆ.