ಇಸ್ಲಾಮಾಬಾದ್, ಶುಕ್ರವಾರ, 4 ಸೆಪ್ಟೆಂಬರ್ 2009( 16:29 IST )
ಭಾರತ ಮುಂಬೈ ದಾಳಿಗಳ ಬಗ್ಗೆ ಇತ್ತೀಚೆಗೆ ಒದಗಿಸಿದ ಕಡತದಲ್ಲಿ ಹಳೆಯ ದಾಖಲೆಗಳಲ್ಲಿ ಹೊಂದಿದ್ದ ಮಾಹಿತಿಗಳಿಗೆ ಹೊಸ ರೂಪ ಕೊಡಲಾಗಿದೆಯೆಂದು ಪಾಕಿಸ್ತಾನ ಬಣ್ಣಿಸಿದೆ. ಈ ಮೂಲಕ ಲಷ್ಕರೆ ತೊಯ್ಬಾ ಸಂಸ್ಥಾಪಕ ಹಫೀಜ್ ಮಹಮದ್ ಸಯೀದ್ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಕಷ್ಟು ಮಾಹಿತಿ ಲಭ್ಯವಿಲ್ಲವೆಂದು ಪಾಕಿಸ್ತಾನ ಇಂಗಿತ ವ್ಯಕ್ತಪಡಿಸಿದೆ.
ಆದರೆ ಭಾರತದ ಕೊನೆಯ ಕಡತವು ಹಳೆಯ ಕಡತಗಳಿಗೆ ಹೊಸ ರೂಪಕೊಟ್ಟ ಹಾಗಿದೆಯೆಂದು ವಿದೇಶಾಂಗ ಕಚೇರಿ ವಕ್ತಾರ ಅಬ್ದುಲ್ ಬಸೀತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮುಂಬೈ ಭಯೋತ್ಪಾದಕ ದಾಳಿಗಳ ರೂವಾರಿಗಳ ಮೇಲೆ ಕ್ರಮ ಕೈಗೊಳ್ಳುವುದಕ್ಕೂ, ಪಾಕಿಸ್ತಾನದ ಜತೆ ಶಾಂತಿ ಮಾತುಕತೆಗೂ ಭಾರತ ನಂಟು ಕಲ್ಪಿಸಿದ ಬಗ್ಗೆ ಪ್ರಶ್ನೆಯೊಂದಕ್ಕೆ ಬಸೀತ್ ಉತ್ತರಿಸುತ್ತಿದ್ದರು.
ಮುಂಬೈ ದಾಳಿಕೋರರ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳಬೇಕೆಂಬ ಭಾರತದ ಕೋರಿಕೆಗೆ ಪಾಕ್ ಒಂದಿಲ್ಲೊಂದು ನೆಪಗಳನ್ನು ಹೇಳುತ್ತಾ ಅಲ್ಲಗಳೆಯುತ್ತಿದೆ. ಮುಂಬೈ ದಾಳಿಕೋರರ ಮೇಲೆ ಕ್ರಮ ಕೈಗೊಳ್ಳದಿದ್ದರೂ ಭಾರತದ ಜತೆ ಜಂಟಿ ಮಾತುಕತೆಗೆ ಮಾತ್ರ ಪಾಕ್ ತುದಿಗಾಲಲ್ಲಿ ನಿಂತಿದೆ. ಇಂಟರ್‌ಪೋಲ್ ಇತ್ತೀಚೆಗೆ ರೆಡ್ ಕಾರ್ನರ್ ನೋಟಿಸ್ ನೀಡಿದ ಸಯೀದ್‌ನನ್ನು ಪಾಕಿಸ್ತಾನ ಯಾವ ರೀತಿಯಲ್ಲಿ ನಿಭಾಯಿಸುತ್ತದೆಂದು ವಕ್ತಾರ ಹೇಳಲಿಲ್ಲ.
ಪಾಕಿಸ್ತಾನದ ಅಧಿಕಾರವರ್ಗ ಮುಂಬೈ ದಾಳಿಗಳಿಗೆ ಸಂಬಂಧಿಸಿದಂತೆ ಬಂಧಿಸಿದ ಶಂಕಿತರ ವಿಚಾರಣೆ ನಡೆಯುತ್ತಿದ್ದು ಮುಂಬೈ ಹತ್ಯೆಕೋರರಿಗೆ ಶಿಕ್ಷೆ ವಿಧಿಸಲು ಇಸ್ಲಾಮಾಬಾದ್ ಗಂಭೀರ ಪ್ರವೃತ್ತಿ ಹೊಂದಿದೆಯೆಂದು ಬಸೀತ್ ತಿಳಿಸಿದ್ದಾರೆ.ಆದರೆ ಇದೇ ಸಂದರ್ಭದಲ್ಲಿ ಜಂಟಿ ಮಾತುಕತೆಯೊಂದೇ ಉಳಿದಿರುವ ದಾರಿಯೆಂದು ಹೇಳಿದ ಅವರು, ಸ್ಥಗಿತಗೊಂಡ ಮಾತುಕತೆ ಮುಂದುವರಿಸಿದರೆ ಅದು ಪಾಕಿಸ್ತಾನಕ್ಕೆ ಅನುಕೂಲ ಮಾಡಿದಹಾಗಲ್ಲ.
ಏಕೆಂದರೆ ಮಾತುಕತೆಗಳು ಮತ್ತು ವಿಚಾರವಿನಿಮಯವು ಉಭಯ ರಾಷ್ಟ್ರಗಳ ನಡುವೆ ಬಾಂಧವ್ಯ ಸುಧಾರಣೆಗೆ ಉಳಿದಿರುವ ಏಕೈಕ ದಾರಿಯೆಂದು ಸ್ಪಷ್ಟಪಡಿಸಿದರು. ನಾವು ಅದನ್ನು ಇಷ್ಟಪಡುತ್ತೇವೊ ಇಲ್ಲವೊ, ಮಾತುಕತೆ ಮೇಜಿಗೆ ನಾವು ಬರಬೇಕು ಎಂದು ಬಸೀತ್ ಹೇಳಿದರು. ವಿದೇಶಾಂಗ ಕಾರ್ಯದರ್ಶಿಗಳ ನಡುವೆ ಭೇಟಿಗೆ ಸ್ಥಳ ಮತ್ತು ದಿನಾಂಕ ಗೊತ್ತುಮಾಡಿಲ್ಲವೆಂದು ಅವರು ಅದೇ ಗಳಿಗೆಯಲ್ಲಿ ಹೇಳಿದರು.ಟ್ರಿನಿಡಾಡ್‌ನಲ್ಲಿ ಕಾಮನ್‌ವೆಲ್ತ್ ಶೃಂಗಸಭೆಯ ನೇಪಥ್ಯದಲ್ಲಿ ಉಭಯ ರಾಷ್ಟ್ರಗಳ ಪ್ರಧಾನಮಂತ್ರಿಗಳು ಭೇಟಿಯಾಗುವ ಪ್ರಸ್ತಾವನೆಯಿಲ್ಲವೆಂದು ಬಸೀತ್ ತಿಳಿಸಿದರು.