ಆಫ್ಘಾನಿಸ್ತಾನ, ಶುಕ್ರವಾರ, 4 ಸೆಪ್ಟೆಂಬರ್ 2009( 17:22 IST )
ಎರಡು ಅಪಹೃತ ತೈಲ ಟ್ಯಾಂಕರ್‌ಗಳು ಶುಕ್ರವಾರ ಉತ್ತರ ಆಫ್ಘಾನಿಸ್ತಾನದ ಕುಂಡುಜ್ ಪ್ರಾಂತ್ಯದಲ್ಲಿ ಸ್ಫೋಟಿಸಿದ್ದರಿಂದ ಸುಮಾರು 90 ಜನರು ಹತಾರಾಗಿದ್ದಾರೆ. ತಾಲಿಬಾನ್ ಉಗ್ರಗಾಮಿಗಳು ತೈಲ ಟ್ಯಾಂಕರ್‌ಗಳಿಂದ ತೈಲವನ್ನು ನಾಗರಿಕರಿಗೆ ವಿತರಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆಯೆಂದು ಪ್ರಾಂತೀಯ ಗವರ್ನರ್ ಮೊಹಮದ್ ಓಮರ್ ತಿಳಿಸಿದ್ದಾರೆ.
ನೆರೆಯ ಬಾಗ್ಲಾನ್ ಪ್ರಾಂತ್ಯವನ್ನು ಕುಂಡುಜ್‌ಗೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಉಗ್ರಗಾಮಿಗಳು ಎರಡು ತೈಲ ಟ್ರಕ್‌ಗಳನ್ನು ಗುರುವಾರ ತಡೆದರೆಂದು ಓಮರ್ ತಿಳಿಸಿದ್ದಾರೆ. ತೈಲ ಟ್ರಕ್‌ಗಳನ್ನು ಅಪಹರಿಸಿದ ಉಗ್ರಗಾಮಿಗಳು ಚಾರ್ಡಾರಾ ಜಿಲ್ಲೆಗೆ ಒಯ್ದು ನಾಗರಿಕರಿಗೆ ತೈಲವನ್ನು ವಿತರಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆಯೆಂದು ಅವರು ಹೇಳಿದ್ದಾರೆ.
ತಕ್ಷಣವೇ ಸ್ಫೋಟದ ಕಾರಣ ತಿಳಿದುಬಂದಿಲ್ಲವೆಂದು ಗವರ್ನರ್ ತಿಳಿಸಿದ್ದು, ಮಿಲಿಟರಿ ಜೆಟ್ ವಿಮಾನವೊಂದು ಟ್ಯಾಂಕರ್ ಮೇಲೆ ಗುಂಡು ಹಾರಿಸಿದ್ದರಿಂದ ಸ್ಫೋಟ ಸಂಭವಿಸಿತೆಂದು ಹೇಳಿದ್ದಾರೆ. ತಾಲಿಬಾನ್ ವಿರುದ್ಧ ಹೋರಾಟಕ್ಕೆ ನ್ಯಾಟೊ ಸಮರ ಜೆಟ್‌ಗಳನ್ನು ನಿಯೋಜಿಸಲಾಗಿದ್ದು, ಅವು ಟ್ಯಾಂಕರ್‌ಗಳ ಮೇಲೆ ಗುಂಡು ಹಾರಿಸಿವೆಯೆಂದು ಜರ್ಮನಿ ಸೇನೆಯ ಡಿಪಿಎ ನೀಡಿದ ಮಾಹಿತಿ ತಿಳಿಸಿದೆ. ಟ್ಯಾಂಕರ್‌ಗಳನ್ನು ಅಪಹರಿಸಿದ ತಾಲಿಬಾನ್ ಜತೆ ನ್ಯಾಟೊ ಪಡೆ ಹೋರಾಟದಲ್ಲಿ ನಿರತವಾಗಿವೆಯೆಂದು ಜರ್ಮನಿ ಸೇನೆ ದೃಢಪಡಿಸಿದೆ.