ಎಚ್1ಎನ್1 ಹಂದಿಜ್ವರದ ಮಹಾಮಾರಿಗೆ ಕನಿಷ್ಠ 2837 ಜನರು ಹತರಾಗಿದ್ದು, ಮುಂಚಿನಷ್ಟು ತೀವ್ರ ಅಸ್ವಸ್ಥತೆಯನ್ನು ಉಂಟುಮಾಡುತ್ತಿಲ್ಲ ಮತ್ತು ವೈರಸ್ ರೂಪಾಂತರ ಹೊಂದುತ್ತಿಲ್ಲವೆಂದು ವಿಶ್ವಆರೋಗ್ಯ ಸಂಸ್ಥೆ ಶುಕ್ರವಾರ ತಿಳಿಸಿದೆ.
ವೈರಸ್ ಬದಲಾವಣೆಯಾದರೆ ಇನ್ನಷ್ಟು ಮಾರಕವೆನಿಸಲಿದ್ದು, ಈ ರೂಪಾಂತರವನ್ನು ಗುರುತಿಸಲು ಡಬ್ಲ್ಯುಎಚ್‌ಒ ಎಚ್ಚರಿಕೆಯಿಂದ ಗಮನಿಸುತ್ತಿದೆ. ಹಂದಿ ಜ್ವರದ ಬಗ್ಗೆ ಡಬ್ಲ್ಯುಎಚ್‌ಒ ವಾರಾಂತ್ಯದ ಹೇಳಿಕೆ ಶುಕ್ರವಾರ ತಡವಾಗಿ ಹೊರಬೀಳಲಿದೆ.
ಕಳೆದ ಆಗಸ್ಟ್ 28ರ ಹಿಂದಿನ ಪರಿಷ್ಕೃತ ವರದಿಯಲ್ಲಿ ಕನಿಷ್ಠ 2185 ಜನರು ಹಂದಿಜ್ವರಕ್ಕೆ ಬಲಿಯಾಗಿದ್ದಾರೆಂದು ಹೇಳಿದೆ. ರೋಗಪೀಡಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ಆರೋಗ್ಯಕರ ವ್ಯಕ್ತಿ ವೈರಸ್ ಸೋಂಕಿಗೆ ಗುರಿಯಾಗುವ ಸಂಭವವಿದ್ದು, ಅತ್ಯಂತ ವೇಗವಾಗಿ ಹರಡುತ್ತಿದೆ. ಮೆಕ್ಸಿಕೊದಲ್ಲಿ ಹಂದಿಗಳು ಮೊದಲಿಗೆ ವೈರಸ್ ಸೋಂಕಿಗೆ ಒಳಗಾದ್ದರಿಂದ ಹಂದಿಜ್ವರವೆಂಬ ಅನ್ವರ್ಥ ನಾಮವನ್ನೂ ಅದಕ್ಕೆ ನೀಡಲಾಗಿದೆ. ಆದರೆ ಈಗ ಮನುಷ್ಯರಿಂದ ಮನುಷ್ಯರಿಗೆ ರೋಗವು ಸುಲಭವಾಗಿ ಹರಡುತ್ತಿದೆ.