ನೇಪಾಳದ ಪ್ರಖ್ಯಾತ ಪಶುಪತಿನಾಥ ದೇವಸ್ಥಾನದ ಇಬ್ಬರು ಕರ್ನಾಟಕದ ಅರ್ಚಕರಿಗೆ ಮಾವೋವಾದಿಗಳ ಗುಂಪೊಂದು ತೀವ್ರವಾಗಿ ಥಳಿಸಿದ್ದು, ಅವರ ಬಟ್ಟೆಗಳನ್ನು ಮತ್ತು ಜನಿವಾರವನ್ನು ಕೂಡ ಹರಿದುಹಾಕಿದ್ದಾರೆ. ಇತ್ತೀಚೆಗೆ ಭಾರತೀಯ ಅರ್ಚಕರನ್ನು ದೇವಸ್ಥಾನದ ಪೂಜೆಗೆ ಮರುನೇಮಕ ಮಾಡಿದ್ದನ್ನು ವಿರೋಧಿಸಿ ಮಾವೋವಾದಿಗಳ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಭಕ್ತರ ಸೋಗಿನಲ್ಲಿ ಆಗಮಿಸಿದ ಸುಮಾರು 40-50 ಮಾವೋವಾದಿಗಳು ಮಧ್ಯಾಹ್ನ 1.30ಕ್ಕೆ ದೇವಸ್ಥಾನದ ಒಳಹೊಕ್ಕು ಗಿರೀಶ್ ಭಟ್ಟ ಮತ್ತು ರಾಘವೇಂದ್ರ ಭಟ್ಟ ಎಂಬ 32ರ ಪ್ರಾಯದ ಅರ್ಚಕರನ್ನು ಹೊರಕ್ಕೆಳೆದು ಥಳಿಸಿದರೆಂದು ಅಧಿಕಾರಿಗಳು ಹೇಳಿದ್ದಾರೆ. ಅವರ ಧೋತಿಯನ್ನು ಹರಿದುಹಾಕಿದ್ದಲ್ಲದೇ ಜನಿವಾರವನ್ನು ಕೂಡ ಕಿತ್ತರು ಎಂದು ಅವರು ಹೇಳಿದ್ದಾರೆ. ಇಬ್ಬರೂ ಅರ್ಚಕರಿಗೆ ಥಳಿತದಿಂದ ತೀವ್ರ ಗಾಯಗಳಾಗಿದ್ದು, ಪೊಲೀಸರು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಅವರಿಬ್ಬರನ್ನು ಪಾರು ಮಾಡಿದರು.
ಅರ್ಚಕರನ್ನು ಕರ್ನಾಟಕದಿಂದ ದೇವಸ್ಥಾನದ ಆಡಳಿತಮಂಡಳಿ ಇತ್ತೀಚೆಗೆ ಕರೆಸಿತ್ತು. ಭಾರತೀಯ ಅರ್ಚಕರಿಗೆ ಥಳಿಸಿದ ಸುದ್ದಿ ಹರಡುತ್ತಿದ್ದಂತೆ ಭಾರತದ ರಾಯಭಾರ ಕಚೇರಿಯು ಎಚ್ಚೆತ್ತು ಕಾನೂನು ಜಾರಿ ಏಜೆನ್ಸಿಗಳು ಮತ್ತು ರಾಜಕೀಯ ನಾಯಕತ್ವದ ಜತೆ ವಿಷಯ ಪ್ರಸ್ತಾಪಿಸಿದ್ದಾರೆ. ಅರ್ಚಕರ ಸುರಕ್ಷತೆ ಮತ್ತು ಭದ್ರತೆ ಖಾತರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ನೇಪಾಳ ಸರ್ಕಾರ ಭರವಸೆ ನೀಡಿದೆಯೆಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಷ್ಣು ಪ್ರಕಾಶ್ ತಿಳಿಸಿದ್ದಾರೆ.
ಅರ್ಚಕರನ್ನು ಬಿಡಿಸಲು ಪ್ರಯತ್ನಿಸಿದ ನಾಲ್ವರು ಪೊಲೀಸರು ಕೂಡ ಮಾವೋವಾದಿಗಳಿಂದ ಪೆಟ್ಟು ತಿಂದಿದ್ದಾರೆ. ಮುಖ್ಯ ದ್ವಾರದ ಬಳಿಯಿಟ್ಟಿದ್ದ ಕಾಣಿಕೆ ಹುಂಡಿಯನ್ನು ಕೂಡ ಮಾವೋವಾದಿಗಳು ಒಡೆದು ದಾಂಧಲೆ ಎಬ್ಬಿಸಿದ್ದಾರೆ.