ನೇಪಾಳದಲ್ಲಿ ನಕಲಿ ಕರೆನ್ಸಿ ಜಾಲ ಕಾರ್ಯನಿರ್ವಹಿಸುತ್ತಿರುವ ವರದಿಗಳ ಹಿನ್ನೆಲೆಯಲ್ಲಿ, ಮಧ್ಯಪ್ರದೇಶದಲ್ಲಿ ಬಂಧಿತರಾದ ನೇಪಾಳ ಪೌರರಿಗೂ ಮತ್ತು ರಾಷ್ಟ್ರದಲ್ಲಿರುವ ಪೌರರಿಗೂ ನಂಟು ಇರುವ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ನೇಪಾಳ ತಿಳಿಸಿದೆ.
ಮಾಜಿ ರಾಜಕುಮಾರ ಪರಾಸ್ ಮತ್ತು ನಕಲಿ ಕರೆನ್ಸಿ ಹಗರಣಕ್ಕೆ ಸಂಬಂಧಪಟ್ಟಂತೆ ಭಾರತದಲ್ಲಿ ಬಂಧಿತರಾದ ವ್ಯಕ್ತಿಗಳ ನಡುವೆ ಸಖ್ಯವಿದೆಯೆಂದು ಮಾಧ್ಯಮಗಳು ಸುದ್ದಿಬಿತ್ತರಿಸಿದ ಬಳಿಕ ಸರ್ಕಾರ ಈ ಕುರಿತು ತನಿಖೆ ಆರಂಭಿಸಿದೆಯೆಂದು ನೇಪಾಳದ ಗೃಹಸಚಿವಾಲಯದ ವಕ್ತಾರ ರತ್ನರಾಜ್ ಪಾಂಡೆ ತಿಳಿಸಿದರು.
ಸ್ಥಳೀಯ ಜನರು ಈ ಜಾಲದಲ್ಲಿ ಭಾಗಿಯಾರಬಹುದೆಂಬ ಊಹಾಪೋಹಗಳು ಇಲ್ಲಿ ಹರಡಿವೆ. ಸ್ಥಳೀಯರು ಮತ್ತು ಭಾರತದ ಬಂಧಿತರಾದ ಜನರ ನಡುವೆ ಯಾವುದೇ ಸಂಪರ್ಕ ಸ್ಥಿರಪಟ್ಟಿಲ್ಲವೆಂದು ಪಾಂಡೆ ತಿಳಿಸಿದರು. ಮಧ್ಯಪ್ರದೇಶ ಪೊಲೀಸರು ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ 11,000 ರೂ. ಮುಖಬೆಲೆಯ ನಕಲಿ ಕರೆನ್ಸಿಗಳನ್ನು ಹೊಂದಿದ್ದ ಇಬ್ಬರನ್ನು ಬಂಧಿಸಿದ ಬಳಿಕ ನೇಪಾಳದಿಂದ ನಕಲಿ ಭಾರತೀಯ ನೋಟುಗಳು ಭಾರತದ ಗಡಿಯೊಳಕ್ಕೆ ಕಳ್ಳಸಾಗಣೆಯಾಗುತ್ತಿರುವ ವಿಚಾರ ಮತ್ತು ನಕಲಿ ನೋಟು ದಂಧೆಯಲ್ಲಿ ನೇಪಾಳದ ಮಾಜಿ ರಾಜಕುಮಾರ ಪರಾಸ್ ಕೂಡ ಒಳಗೊಂಡಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿತ್ತು.
ಪ್ರಧಾನಮಂತ್ರಿ ಮಾಧವಕುಮಾರ್ ನೇಪಾಳ ಭೇಟಿ ಸಂದರ್ಭದಲ್ಲಿ ನೇಪಾಳ-ಭಾರತ ಗಡಿಯಲ್ಲಿ ಕ್ರಿಮಿನಲ್ ಚಟುವಟಿಕೆ ನಿಯಂತ್ರಣ ಒಪ್ಪಂದಕ್ಕೆ ಇತ್ತೀಚೆಗೆ ಭಾರತ ಸಹಿಹಾಕಿದೆ. ಆದರೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಬಂಧಿತರಾದ ಕ್ರಿಮಿನಲ್‌ಗಳನ್ನು ಹಸ್ತಾಂತರಿಸುವ ಕುರಿತು ನೇಪಾಳ ಮತ್ತು ಭಾರತ ನಡುವೆ ಯಾವುದೇ ಹಸ್ತಾಂತರ ಒಪ್ಪಂದ ಮಾಡಿಕೊಂಡಿಲ್ಲ.