ಆರ್ಥಿಕತೆ, ಇಂಧನ ಸೇರಿದಂತೆ ಪರಮಾಣು ಮತ್ತು ಹೈಡ್ರೋಕಾರ್ಬನ್ ಕ್ಷೇತ್ರಗಳ ಬಗ್ಗೆ ವಿಶೇಷ ಗಮನವಹಿಸುವುದರೊಂದಿಗೆ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಭಾರತ ಮತ್ತು ರಷ್ಯಾ ನಿರ್ಧರಿಸಿದೆ. ಇಲ್ಲಿಗೆ ಐದು ದಿನದ ಭೇಟಿ ನೀಡಿರುವ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ರಷ್ಯಾ ಪ್ರಧಾನಮಂತ್ರಿ ವ್ಲಾಡಿಮಿರ್ ಪುಟಿನ್ ಜತೆ ದ್ವಿಪಕ್ಷೀಯ ವಿಷಯಗಳನ್ನು ವ್ಯಾಪಕವಾಗಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ, ಅಂತಾರಾಷ್ಟ್ರೀಯ ವಿಷಯಗಳು, ಭಯೋತ್ಪಾದನೆಯ ಬೆದರಿಕೆ ಮುಂತಾದ ವಿಷಯಗಳನ್ನು ಚರ್ಚಿಸಿದರು ಮತ್ತು ಮುಂದಿನ ವರ್ಷದಲ್ಲಿ ಉಭಯ ರಾಷ್ಟ್ರಗಳ ನಡುವೆ 10 ಶತಕೋಟಿ ಡಾಲರ್ ವಹಿವಾಟಿಗೆ ಒತ್ತುನೀಡುವ ಬಗ್ಗೆ ಗಮನಹರಿಸಿದರು.
ಜಾಗತಿಕ ಆರ್ಥಿಕ ಹಿಂಜಿರಿತದ ಸಂದರ್ಭದಲ್ಲಿ ಆರ್ಥಿಕ ಸಹಕಾರವು ಉಭಯ ರಾಷ್ಟ್ರಗಳ ನಡುವೆ ಬಾಂಧವ್ಯಕ್ಕೆ ತಳಹದಿಯಾಗಿ ಉಳಿದಿದೆಯೆಂದು ಉಭಯ ನಾಯಕರು ಭಾವಿಸಿದ್ದು, ದ್ವಿಪಕ್ಷೀಯ ವ್ಯಾಪಾರ ಸಂಬಂಧ ಪ್ರಗತಿ ಸಾಧಿಸಿರುವ ಹಿನ್ನೆಲೆಯಲ್ಲಿ ವಹಿವಾಟಿನ ಗುರಿ ಸಾಧಿಸುವುದು ವಾಸ್ತವಿಕವೆಂದು ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ವರದಿಗಾರರಿಗೆ ತಿಳಿಸಿದರು.