ವಾಷಿಂಗ್ಟನ್, ಶನಿವಾರ, 5 ಸೆಪ್ಟೆಂಬರ್ 2009( 11:41 IST )
ಇರಾಕಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಹಾಗೂ ಬಾಲಕಿಯ ಕುಟುಂಬದ ಕಗ್ಗೊಲೆ ಆರೋಪದ ಮೇಲೆ ಅಮೆರಿಕದ ಸೈನಿಕನೊಬ್ಬ ತನ್ನ ಜೀವನವನ್ನು ಕಂಬಿಗಳ ಹಿಂದೆ ಕಳೆಯಬೇಕೆಂದು ನ್ಯಾಯಾಧೀಶರು ಶುಕ್ರವಾರ ತೀರ್ಪಿತ್ತಿದ್ದಾರೆ.2006ರಲ್ಲಿ 14 ವರ್ಷದ ಬಾಲಕಿ ಅಬ್ಬೀರ್ ಅಲ್ ಜನಬಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆ ಹಾಗೂ ಬಾಲಕಿಯ ತಾಯಿ, ತಂದೆ ಮತ್ತು 6 ವರ್ಷ ಪ್ರಾಯದ ಸೋದರಿಯನ್ನು ಬಾಗ್ದಾದ್‌ನಲ್ಲಿನ ಅವರ ಮನೆಯಲ್ಲಿ ಹತ್ಯೆಮಾಡಿದ ಆರೋಪವನ್ನು ಸ್ಟೀವನ್ ಡೇಲ್ ಗ್ರೀನ್ ಮೇಲೆ ಹೊರಿಸಲಾಗಿದೆ.
ಮಹಮುದಿಯ ಸಂಚಾರಿ ಚೌಕಿಯಲ್ಲಿ ವಿಸ್ಕಿ ಹೀರುತ್ತಾ, ಇಸ್ಪೀಟಿನ ಎಲೆಗಳನ್ನು ಜೋಡಿಸುತ್ತಾ ಈ ಅಪರಾಧದ ಸಂಚು ರೂಪಿಸಿದ ಐವರು ಸೈನಿಕರಿಗೆ ಗ್ರೀನ್ ರಿಂಗ್‌ಲೀಡರ್ ಪಟ್ಟವಹಿಸಿದ್ದ. ಮೂವರು ಸೈನಿಕರಿಗೆ ಈ ದಾಳಿಗಾಗಿ ಮಿಲಿಟರಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದ್ದು, ನಾಲ್ಕನೆಯವನು ಹೊರಗೆ ಕಾವಲು ಕಾದಿದ್ದಕ್ಕಾಗಿ 27 ತಿಂಗಳ ಜೈಲುಶಿಕ್ಷೆಯನ್ನು ವಿಧಿಸಲಾಗಿದೆ.
ಗ್ರೀನ್ ಪಾತ್ರ ಈ ಅಪರಾಧದಲ್ಲಿ ಬೆಳಕಿಗೆ ಬರುವ ಮುಂಚೆ ಅಸ್ವಸ್ಥ ಮನಸ್ಥಿತಿ ಹಿನ್ನೆಲೆಯಲ್ಲಿ ಅವನನ್ನು ಸೇನೆಯಿಂದ ಪದಚ್ಯುತಿಗೊಳಿಸಲಾಗಿತ್ತು. ಗ್ರೀನ್‌ಗೆ ಮರಣದಂಡನೆ ವಿಧಿಸಬೇಕೆಂದು ಪ್ರಾಸಿಕ್ಯೂಟರ್‌ಗಳು ತೀರ್ಪುಗಾರರಿಗೆ ಕೋರಿದರಾದರೂ, ಮರಣದಂಡನೆಗೆ ಸರ್ವಾನುಮತದ ತೀರ್ಪು ಮುಟ್ಟಲು ಅವರು ವಿಫಲರಾದರು.