ವಾಷಿಂಗ್ಟನ್, ಶನಿವಾರ, 5 ಸೆಪ್ಟೆಂಬರ್ 2009( 15:00 IST )
ಪಾಕಿಸ್ತಾನವು ತನ್ನ ಅಣ್ವಸ್ತ್ರಗಳಲ್ಲಿ ಗುಣಾತ್ಮಕ ಮತ್ತು ಪ್ರಮಾಣಾತ್ಮಕ ಸುಧಾರಣೆಗಳನ್ನು ಮಾಡಿರುವುದಾಗಿ ಅಮೆರಿಕ ಸಂಸತ್ತಿನ ವರದಿಯೊಂದು ಬಯಲುಮಾಡಿದೆ. ಈ ಮೂಲಕ ಪಾಕಿಸ್ತಾನ ತನ್ನ ಅಣ್ವಸ್ತ್ರಗಳನ್ನು ಭಾರತದ ಮೇಲೆ ಗುರಿಯಿರಿಸುವ ಸಂದರ್ಭಗಳ ಸಂಖ್ಯೆಯನ್ನು ಪಾಕಿಸ್ತಾನ ಹೆಚ್ಚಿಸಿಕೊಳ್ಳಬಹುದೆಂದು ವರದಿಯಲ್ಲಿ ಹೇಳಲಾಗಿದೆ.
ಇಸ್ಲಾಮಾಬಾದ್ ಅಣ್ವಸ್ತ್ರಾಗಾರವು 60 ಪರಮಾಣು ಅಸ್ತ್ರಗಳನ್ನು ಹೊಂದಿರುವುದಾಗಿ ಸಂಶೋಧನೆ ಸೇವೆಯ ಇತ್ತೀಚಿನ ವರದಿಯಲ್ಲಿ ಅಂದಾಜು ಮಾಡಿದ್ದು,ಈ ಸಂಖ್ಯೆ ಇನ್ನೂ ಹೆಚ್ಚಬಹುದೆಂದು ಹೇಳಿದೆ. ಕಳೆದ ವಾರ ಅಮೆರಿಕ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ಕೂಡ ಪಾಕಿಸ್ತಾನದ ಅಣ್ವಸ್ತ್ರಗಳ ಭಂಡಾರ 100ಕ್ಕೆ ಸಮೀಪಿಸುತ್ತಿದೆಯೆಂದು ತಿಳಿಸಿತ್ತು.ಅಮೆರಿಕ ಕಾಂಗ್ರೆಸ್‌ನ ಸ್ವತಂತ್ರ ಸಂಶೋಧನಾ ವಿಭಾಗವಾದ ಸಿಆರ್‌ಎಸ್, ಪಾಕಿಸ್ತಾನ ಸರ್ಕಾರದಿಂದ ಈ ಬಗ್ಗೆ ನೇರವಾಗಿ ಅಧಿಕೃತ ಸುಳಿವು ಸಿಕ್ಕಿದೆಯೆಂದು ಬಹಿರಂಗಮಾಡಿದೆ.
ಸರ್ಕಾರ ಪರಮಾಣು ಅಥವಾ ಸಾಂಪ್ರದಾಯಿಕ ಶಸ್ತ್ರಾಸ್ತ್ರ ಪೈಪೋಟಿಗೆ ವಿರೋಧವಾಗಿದ್ದರೂ, ಭಾರತ ಸಾಂಪ್ರದಾಯಿಕ ಮತ್ತು ಅಣ್ವಸ್ತ್ರ ವಿಸ್ತರಣೆ ಮಾಡುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ ತನ್ನ ಅಣ್ವಸ್ತ್ರಗಳನ್ನು ಹೆಚ್ಚಿಸುವ ಅಗತ್ಯ ಪಾಕಿಸ್ತಾನಕ್ಕೆ ಕಂಡುಬಂದಿದೆಯೆಂದು ಪಾಕ್ ವಿದೇಶಾಂಗ ಕಚೇರಿ ವಕ್ತಾರ ಮೇ 21ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಇಂಗಿತ ವ್ಯಕ್ತಪಡಿಸಿದ್ದರು. 'ಪಾಕಿಸ್ತಾನ ಅಣ್ವಸ್ತ್ರಗಳು: ಪ್ರಸರಣ ಮತ್ತು ಭದ್ರತಾ ವಿಷಯ' ಹೆಸರಿನ ಸಿಆರ್‌ಎಸ್ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದ್ದು, ಭಾರತ ದೇಶೀಯವಾಗಿ ನಿರ್ಮಿಸಿದ ಪರಮಾಣು ಚಾಲಿತ ಸಬ್‌ಮೆರೀನ್‌ಗೆ ಚಾಲನೆ ನೀಡಿದ್ದಕ್ಕೆ ಪ್ರತಿಕ್ರಿಯಿಸುತ್ತಾ ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ಮೇಲಿನಂತೆ ತಿಳಿಸಿದ್ದರು.
ಭಾರತದ ಹೊಸ ಮಾರಕಾಸ್ತ್ರಗಳಿಂದ ಶಾಂತಿ ಮತ್ತು ಸ್ಥಿರತೆಗೆ ಹಾನಿಯಾಗಿದೆಯೆಂದು ವಕ್ತಾರ ಪ್ರತಿಪಾದಿಸಿದ್ದರು. ಭಾರತದ ಜತೆ ಶಸ್ತ್ರಾಸ್ತ್ರ ಪೈಪೋಟಿಗೆ ಇಳಿಯದೇ, ದಕ್ಷಿಣಏಷ್ಯಾ ವಲಯದಲ್ಲಿ ಆಯಕಟ್ಟಿನ ಸಮತೋಲನ ಕಾಯ್ದುಕೊಳ್ಳಲು ಮತ್ತು ಭದ್ರತೆ ಕಾಪಾಡಲು ಪಾಕಿಸ್ತಾನ ಸೂಕ್ತ ಕ್ರಮ ಕೈಗೊಳ್ಳುತ್ತದೆಂದು ಅವರು ಹೇಳಿದ್ದರು. ತನ್ನ ಅಣ್ವಸ್ತ್ರ ಭಂಡಾರದಲ್ಲಿ ಗುಣಾತ್ಮಕ ಮತ್ತು ಪ್ರಮಾಣಾತ್ಮಕ ಸುಧಾರಣೆ ಮಾಡುವ ಮೂಲಕ ಭಾರತದ ವಿರುದ್ಧ ಅಣ್ವಸ್ತ್ರ ಬಳಕೆಗೆ ಇಚ್ಛಿಸುವ ಸಂದರ್ಭಗಳನ್ನು ಪಾಕಿಸ್ತಾನ ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ.