ಕರಾಚಿ/ಬೆಂಗಳೂರು, ಶನಿವಾರ, 5 ಸೆಪ್ಟೆಂಬರ್ 2009( 18:29 IST )
ಭಾರತ-ಪಾಕ್ ಮಾತುಕತೆ ವಿಳಂಬದಿಂದ ಭಯೋತ್ಪಾದಕರಿಗೆ ಕುತ್ಸಿತ ಸಂಚು ರೂಪಿಸಲು ನೆರವಾಗುತ್ತದೆಂದು ಪಾಕಿಸ್ತಾನ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಶನಿವಾರ ಎಚ್ಚರಿಸಿದ್ದಾರೆ. ಭಾರತದ ಜತೆ ಸಮಾನತೆ ಆಧಾರದ ಸಂಬಂಧವನ್ನು ಮತ್ತು ಶೀಘ್ರದಲ್ಲೇ ಜಂಟಿ ಮಾತುಕತೆ ಆರಂಭವನ್ನು ಪಾಕ್ ಬಯಸುತ್ತದೆ. ಕಡಿಮೆ ಆಧಾಯದ ವರ್ಗಕ್ಕೆ ಗೃಹನಿರ್ಮಾಣ ಯೋಜನೆಯನ್ನು ಉದ್ಘಾಟಿಸಿದ ಬಳಿಕ ಅವರು ವರದಿಗಾರರ ಜತೆ ಮಾತನಾಡುತ್ತಿದ್ದರು.
ಮುಂಬೈ ಭಯೋತ್ಪಾದನೆ ದಾಳಿ ಹಿನ್ನೆಲೆಯಲ್ಲಿ ಭಾರತ ಜಂಟಿ ಮಾತುಕತೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.ಮುಂಬೈ ಕಗ್ಗೊಲೆಯ ಹಂತಕರಿಗೆ ಶಿಕ್ಷೆ ವಿಧಿಸಿದ ಬಳಿಕವೇ ಮಾತುಕತೆ ಆರಂಭವೆಂದು ಭಾರತ ಖಡಾಖಂಡಿತವಾಗಿ ಹೇಳಿದೆ. ಈ ಹಿನ್ನೆಲೆಯಲ್ಲಿ ಮಾತುಕತೆ ವಿಳಂಬವಾದರೆನಭಯೋತ್ಪಾದಕರಿಗೆ ಮತ್ತೆ ದಾಳಿಗೆ ಸಂಚುರೂಪಿಸಲು ನೆರವಾಗುತ್ತದೆಂದು ಗಿಲಾನಿ ಭಯ ಹುಟ್ಟಿಸಿದ್ದಾರೆ.
ಶನಿವಾರ ಕೂಡ ಭಾರತ ಈ ವಿಷಯವನ್ನೇ ಪುನರುಚ್ಚರಿಸಿದೆ. ಲಷ್ಕರೆ ತೊಯ್ಯಬಾ ವಿರುದ್ಧ ಕ್ರಮಕ್ಕೆ ಪಾಕಿಸ್ತಾನ ಸಾಕಷ್ಟು ಸಾಕ್ಷ್ಯಾಧಾರ ನೀಡಿದೆಯೆಂದು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಪುನರುಚ್ಚರಿಸಿದ್ದಾರೆ. ಮುಂಬೈ ದಾಳಿಕೋರರನ್ನು ಸಿಕ್ಕಿಸಲು ನಮ್ಮ ಕಡತಗಳು ಸಾಕಷ್ಟು ಸಾಕ್ಷ್ಯಾಧಾರ ಹೊಂದಿವೆಯೆಂದು ಬೆಂಗಳೂರಿನಲ್ಲಿ ಕೃಷ್ಣ ವರದಿಗಾರರಿಗೆ ಹೇಳಿದ್ದಾರೆ. ಮುಂಬೈ ದಾಳಿಕೋರರ ಹೆಸರುಗಳನ್ನು ನಾವು ಪಾಕಿಸ್ತಾನಕ್ಕೆ ಕಳಿಸಿದ್ದೇವೆ. ಅವರನ್ನು ಬಂಧಿಸಿ ಶಿಕ್ಷೆ ವಿಧಿಸುವುದು ಸಹಜಧರ್ಮವೆಂದು ಕೃಷ್ಣ ಪ್ರತಿಪಾದಿಸಿದ್ದಾರೆ.
ಆದರೆ ಭಾರತ ಮಾತುಕತೆ ಸ್ಥಗಿತಗೊಳಿಸಿದ್ದು ಪಾಕಿಸ್ತಾನಕ್ಕೆ ಇರಿಸುಮುರಿಸು ಉಂಟುಮಾಡಿದ್ದು, ಹೇಗಾದರೂ ಮಾಡಿ ಮಾತುಕತೆ ಮೇಜಿಗೆ ಭಾರತವನ್ನು ಕರೆತರಲು ಅನೇಕ ತಂತ್ರವನ್ನು ಹೆಣೆಯುತ್ತಿದೆಯೆಂದು ಹೇಳಲಾಗಿದೆ. ಭಯೋತ್ಪಾದಕರ ಭೂತವನ್ನು ಛೂಬಿಟ್ಟು ಮಾತುಕತೆಗೆ ಬರುವಂತೆ ಆಹ್ವಾನಿಸುವುದು ಪಾಕ್ ಅಸ್ತ್ರಗಳಲ್ಲಿ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಮಾತುಕತೆ ವಿಳಂಬಿಸಿದರೆ ಭಯೋತ್ಪಾದಕರು ಸಂಚು ರೂಪಿಸಲು ನೆರವಾಗುತ್ತದೆಂದು ಗಿಲಾನಿ ಹೆದರಿಸಿದ್ದಾರೆ.