ಪಶುಪತಿ ದೇವಾಲಯದ ಭಾರತೀಯ ಅರ್ಚಕರ ಮೇಲೆ ನಡೆದ ದಾಳಿಯ ನಂತರ ಸುರಕ್ಷತೆಯನ್ನು ನೇಪಾಳ ಸರಕಾರ ಖಾತ್ರಿಪಡಿಸಿರುವ ಬೆನ್ನಿಗೆ, ದಾಳಿಯ ಹಿಂದೆ ಚೀನಾ ಕೈವಾಡವಿರುವುದು ಗೋಚರವಾಗುತ್ತಿದೆ.
ಭಾರತೀಯ ಅರ್ಚಕರ ಮೇಲೆ ದಾಳಿ ನಡೆಸಿದವರು ಚೀನಾ ಪರ ಮಾವೋವಾದಿಗಳು ಎಂದು ಭಾನುವಾರ ಪ್ರಕರಣದ ತನಿಖೆ ನಡೆಸುತ್ತಿರುವ ಏಜೆನ್ಸಿಯ ನಿಕಟ ಮೂಲಗಳು ಭಾರತೀಯ ಟೀವಿ ವಾಹಿನಿಯೊಂದಕ್ಕೆ ತಿಳಿಸಿವೆ.
ತಮ್ಮ ಸ್ವಂತ ರಾಜಕೀಯ ರೂಪುರೇಷೆಗಳನ್ನು ಕಂಡುಕೊಳ್ಳಲು ಚೀನಾದೊಂದಿಗೆ ಸೇರಿಕೊಂಡು ಮಾವೋವಾದಿಗಳು ಭಾರತವನ್ನು ಆಕ್ರಮಿಸುವ ಯೋಜನೆಗೆ ಯತ್ನಿಸುತ್ತಿದ್ದಾರೆ. ಅಲ್ಲದೆ ನೇಪಾಳದಲ್ಲಿ ಭಾರತ ವಿರೋಧಿ ಅಲೆಯನ್ನು ಹೆಚ್ಚಿಸುತ್ತಿದ್ದಾರೆ. ಈಗ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳಲು ಚೀನಾ ಕೂಡ ಮುಂದಾಗುವ ಸಾಧ್ಯತೆಯಿದೆ ಎಂದು ಮೂಲ ಬಹಿರಂಗಪಡಿಸಿದೆ.
ಅದೇ ಹೊತ್ತಿಗೆ ಭಾರತವು ನೇಪಾಳದೊಂದಿಗೆ ಹೊಂದಿರುವ ಕೆಲವು ಪ್ರಮುಖ ಒಪ್ಪಂದಗಳ ರೀತಿಯಲ್ಲಿ ತಾನು ಒಪ್ಪಂದ ಮಾಡಿಕೊಳ್ಳಲು ಚೀನಾ ಮುಂದಾಗುತ್ತಿದೆ.
ನೇಪಾಳದ ಪ್ರಸಿದ್ಧ ಪಶುಪತಿ ದೇವಸ್ಥಾನದ ಇಬ್ಬರು ನೂತನ ಭಾರತೀಯ ಅರ್ಚಕರಿಗೆ ಮಾವೋವಾದಿಗಳ ಗುಂಪೊಂದು ಶುಕ್ರವಾರ ಕಾಠ್ಮಂಡುವಿನಲ್ಲಿ ಥಳಿಸಿದ ನಂತರ ಈ ಬೆಳವಣಿಗೆಗಳು ಕಂಡು ಬಂದಿವೆ.
25ರಿಂದ 30ರಷ್ಟಿದ್ದ ಮಾವೋವಾದಿಗಳ ಗುಂಪು ಭಕ್ತರಂತೆ ದೇವಳ ಪ್ರವೇಶಿಸಿದ ನಂತರ ಕರ್ನಾಟಕದ ಗಿರೀಶ್ ಭಟ್ ಮತ್ತು ರಾಘವೇಂದ್ರ ಭಟ್ ಎಂಬಿಬ್ಬರು ಅರ್ಚಕರ ಮೇಲೆ ದಾಳಿ ನಡೆಸಿತ್ತು.
ದಾಳಿಯನ್ನು ತೀವ್ರವಾಗಿ ಖಂಡಿಸಿದ್ದ ಭಾರತದ ಕ್ಷಮೆ ಯಾಚಿಸಿರುವ ನೇಪಾಳವು, ಅರ್ಚಕರಿಗೆ ಸಂಪೂರ್ಣ ಭದ್ರತೆ ನೀಡುವ ಭರವಸೆ ನೀಡಿದೆ. ದೇವಸ್ಥಾನದಲ್ಲಿರುವ ಭಾರತೀಯ ಅರ್ಚಕರ ಸುರಕ್ಷತೆಯು ನಮ್ಮ ಮೊದಲ ಆದ್ಯತೆ ಎಂದು ಅಲ್ಲಿನ ಸಂಸ್ಕೃತಿ ಸಚಿವ ಮಿನಿಂದ್ರ ರಿಜಾಲ್ ತಿಳಿಸಿದ್ದಾರೆ.
ಅರ್ಚಕರು ಶಿರಸಿ, ಮೂಲ್ಕಿಯವರು.. ನೇಪಾಳದಲ್ಲಿ ಹಲ್ಲೆಗೊಳಗಾಗಿರುವ ಅರ್ಚಕ ಗಿರೀಶ್ ಭಟ್ ಮತ್ತು ರಾಘವೇಂದ್ರ ಭಟ್ ಶಿರಸಿ ಮತ್ತು ಮೂಲ್ಕಿಯವರೆಂದು ತಿಳಿದು ಬಂದಿದೆ.
ಗಿರೀಶ್ ಶಿರಸಿ ತಾಲೂಕಿನ ತೋಟದಳ್ಳಿಯವರಾಗಿದ್ದರೆ, ರಾಘವೇಂದ್ರ ಮಂಗಳೂರು ತಾಲೂಕಿನ ಮೂಲ್ಕಿಯ ಮುಚ್ಚೂರಿನವರು. ಇಬ್ಬರೂ ಉನ್ನತ ವೇದಾಧ್ಯಯನ ಜ್ಞಾನ ಹೊಂದಿದ್ದಾರೆ. ಇಬ್ಬರದ್ದೂ ಅರ್ಚಕ ಮನೆತನ ಎಂದು ಮೂಲಗಳು ತಿಳಿಸಿವೆ.