ಭಾರತೀಯ ವಿದ್ಯಾರ್ಥಿಗಳಿಂದ ಆಸ್ಟ್ರೇಲಿಯಾದಲ್ಲಿ ಲೈಂಗಿಕ ಕಿರುಕುಳ!
ಮೆಲ್ಬೋರ್ನ್, ಭಾನುವಾರ, 6 ಸೆಪ್ಟೆಂಬರ್ 2009( 15:46 IST )
ರೈಲಿನಲ್ಲಿ ಮಲಗಿದ್ದ 17ರ ಹರೆಯದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಇಬ್ಬರು ಭಾರತೀಯ ವಿದ್ಯಾರ್ಥಿಗಳನ್ನು ಮೆಲ್ಬೋರ್ನ್ನಲ್ಲಿ ಬಂಧಿಸಲಾಗಿದೆ.
ಸುಖೀಂದರ್ ಸಿಂಗ್ (22) ಮತ್ತು ಅಮರಜೀತ್ ಸಿಂಗ್ (28) ನ್ಯೂ ಸೌತ್ ವೇಲ್ಸ್ ಪೊಲೀಸರಿಂದ ಬಂಧನಕ್ಕೊಳಗಾದವರು. ಯುವತಿಯು ಮೆಲ್ಬೋರ್ನ್ನಿಂದ ರೈಲಿನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಈ ಇಬ್ಬರು ಆರೋಪಿಗಳು ಆಕೆಗೆ ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಜಾಮೀನು ನಿರಾಕರಿಸಲಾಗಿದೆ.
ಮೆಲ್ಬೋರ್ನ್-ಸಿಡ್ನಿ ರೈಲಿನಲ್ಲಿ ಮಲಗಿದ್ದ ಯುವತಿಗೆ ರಾತ್ರಿ ಮೂರು ಗಂಟೆ ಹೊತ್ತಿಗೆ ಆರೋಪಿತ ಯುವಕರು ಪೀಡಿಸಲು ಆರಂಭಿಸಿದ್ದರಿಂದ ಆಕೆ ಎಚ್ಚರಗೊಂಡಿದ್ದಳು.
'ಆರೋಪಿಗಳ ಕೈಯಿಂದ ರೈಲ್ವೇ ಸಿಬ್ಬಂದಿಗಳ ಸಹಾಯದಿಂದ ಬಿಡಿಸಿಕೊಳ್ಳುವ ಮೊದಲು ಅವರು ಹುಡುಗಿಯ ಮೇಲೆ ಅಕ್ರಮವಾಗಿ ಲೈಂಗಿಕ ಹಲ್ಲೆ ನಡೆಸಿದ್ದರು' ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಘಟನೆ ನಡೆದ ನಂತರ ಗೌಲಬರ್ನ್ ರೈಲು ನಿಲ್ದಾಣದಲ್ಲಿ ರೈಲ್ವೇ ಸಿಬ್ಬಂದಿ ಪೊಲೀಸರನ್ನು ಸಂಪರ್ಕಿಸಿದ್ದರು.
ವಿದ್ಯಾರ್ಥಿ ವಿಸಾದಲ್ಲಿ ಆಸ್ಟ್ರೇಲಿಯಾಕ್ಕೆ ಬಂದಿರುವ ಇಬ್ಬರು ಭಾರತೀಯರು ವಿಚಾರಣೆ ಸಂದರ್ಭದಲ್ಲಿ ಯಾವುದೇ ಸಮರ್ಥನೆಯನ್ನು ನೀಡಿಲ್ಲ. ಅವರಿಗೆ ಲೈಂಗಿಕ ಹಲ್ಲೆ ಆರೋಪದ ಮೇಲೆ ಶಿಕ್ಷೆ ವಿಧಿ ವಿಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ವಿಚಾರಣೆಯನ್ನು ಸೆಪ್ಟೆಂಬರ್ 16ಕ್ಕೆ ಮುಂದೂಡಲಾಗಿದ್ದು, ಆರೋಪಿಗಳು ಜಾಮೀನಿಗಾಗಿ ಮನವಿ ಮಾಡಿಕೊಳ್ಳುವ ಸಾಧ್ಯತೆಗಳಿವೆ.
ಎನ್ಎಸ್ಡಬ್ಲ್ಯೂ ಸೆಂಟ್ರಲ್ ಕೋಸ್ಟ್ನ ಗಾಸ್ಫಾರ್ಡ್ ನಿವಾಸಿಯಾಗಿರುವ ಯುವತಿಯನ್ನು ಇಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಕೌನ್ಸೆಲಿಂಗ್ ಭರವಸೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.