ಇಸ್ಲಾಮಾಬಾದ್, ಸೋಮವಾರ, 7 ಸೆಪ್ಟೆಂಬರ್ 2009( 20:03 IST )
PTI
PTI
ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಅಲ್ ಖಾಯಿದಾ ಉಗ್ರಗಾಮಿ ಸಂಘಟನೆಯ ನಾಯಕ ಮತ್ತು ಅಮೆರಿಕದ ಅವಳಿ ಕಟ್ಟಡ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿಯ ರೂವಾರಿ ಒಸಾಮಾ ಬಿನ್ ಲಾಡೆನ್‌ನನ್ನು ಸೌದಿ ಅರೇಬಿಯದಲ್ಲಿ ಸುಮಾರು ಐದು ಬಾರಿ ಭೇಟಿ ಮಾಡಿದ್ದರೆಂಬ ಆತಂಕಕಾರಿ ಸಂಗತಿ ಬಯಲಾಗಿದೆ.
ಐಎಸ್‌ಐ ಮಾಜಿ ಅಧಿಕಾರಿ ಖಲೀದ್ ಖ್ವಾಜಾ ಈ ವಿಷಯವನ್ನು ಸಂದರ್ಶನವೊಂದರಲ್ಲಿ ಬಹಿರಂಗ ಮಾಡಿದ್ದಾರೆ. ನವಾಜ್ ಷರೀಫ್ ಅವರು ಪಂಜಾಬ್ ಮುಖ್ಯಮಂತ್ರಿಯಾಗಿದ್ದಾಗ ಸೌದಿಯ ರಾಜಮನೆತನವನ್ನು ಮೊದಲ ಬಾರಿ ಭೇಟಿಯಾಗಿದ್ದಾಗ ಸೌದಿ ರಾಜಮನೆತನ ಅವರಿಗೆ ಅಷ್ಟೊಂದು ಪ್ರಾಮುಖ್ಯತೆ ನೀಡಿರಲಿಲ್ಲ. ಷರೀಫ್ ಮನವಿ ಮೇಲೆ ಅಲ್ ಖಾಯಿದಾ ನಾಯಕ ಒಸಾಮಾ ಬಿನ್ ಲಾಡೆನ್ ಸೌದಿ ರಾಜಮನೆತನಕ್ಕೆ ಷರೀಫ್‌ರನ್ನು ಪರಿಚಯಿಸಿದ್ದು, ಸೌದಿ ರಾಜಮನೆತನದ ಜತೆ ಸಾಮೀಪ್ಯಕ್ಕೆ ನೆರವಾಗಿದ್ದ.
PTI
PTI
ಈ ಭೇಟಿಗಳ ಸಂದರ್ಭದಲ್ಲಿ ಉಭಯತ್ರರೂ ಸುದೀರ್ಘ ಅವಧಿಯವರೆಗೆ ಚರ್ಚೆ ನಡೆಸಿದ್ದಾರೆಂದು ಹೇಳಲಾಗಿದೆ. ಈ ಭೇಟಿಗಳ ಸಂದರ್ಭದಲ್ಲಿ ಪಾಕಿಸ್ತಾನಿಯರಿಗೆ ಸೌದಿ ಅರೇಬಿಯದಲ್ಲಿ ಉದ್ಯೋಗಾವಕಾಶ ಕಲ್ಪಿಸಬೇಕೆಂದು ಮತ್ತು ಪಾಕಿಸ್ತಾನದ ಅಭಿವೃದ್ಧಿಗೆ ಪೂರಕ ಕೆಲಸ ಮಾಡುವಂತೆ ನವಾಜ್ ಷರೀಫ್ ಮನವಿ ಮಾಡಿದ್ದರೆಂದು ಹೇಳಲಾಗಿದೆ. ಪಾಕಿಸ್ತಾನದಲ್ಲಿ ಯಾವುದೇ ರಾಜಕೀಯ ನಾಯಕರು ಉಗ್ರಗಾಮಿಗಳ ಜತೆ ನಂಟು ಹೊಂದುವುದು ಸುಲಭವೆಂದು ಇದರಿಂದ ಜಾಹೀರಾಗಿದೆ. ಒಂದು ಕಡೆ ಪಾಕಿಸ್ತಾನ ಭಯೋತ್ಪಾದನೆಯನ್ನು ಬುಡಸಮೇತ ಕಿತ್ತುಹಾಕುವುದಾಗಿ ಹೇಳುತ್ತಾ, ಇನ್ನೊಂದು ಕಡೆ ಉಗ್ರಗಾಮಿಗಳ ಜತೆ ರಹಸ್ಯ ನಂಟು ಇಟ್ಟುಕೊಳ್ಳುವ ಮೂಲಕ ಇಬ್ಬಗೆಯ ನೀತಿ ಅನುಸರಿಸುತ್ತಿರುವುದು ಇದರಿಂದ ಬಹಿರಂಗವಾಗಿದೆ.