ತಮಿಳು ಬಂಡುಕೋರರ ಪರ ಯೂನಿಸೆಫ್ ಅಧಿಕಾರಿ ಪ್ರಚಾರ ನಡೆಸುತ್ತಿದ್ದಾರೆಂದು ಆರೋಪಿಸಿರುವ ಶ್ರೀಲಂಕಾ ಸರ್ಕಾರ ದೇಶವನ್ನು ಬಿಟ್ಟು ತೆರಳುವಂತೆ ಅವರಿಗೆ ಆದೇಶಿಸಿದೆಯೆಂದು ವಿಶ್ವಸಂಸ್ಥೆ ಮಕ್ಕಳ ನಿಧಿ ತಿಳಿಸಿದೆ.
ಶ್ರೀಲಂಕಾದಲ್ಲಿ ತಮ್ಮ ವಕ್ತಾರ, ಆಸ್ಟ್ರೇಲಿಯದ ಪ್ರೌಢ ಜೇಮ್ಸ್ ಎಲ್ಡರ್ ವಿರುದ್ಧ ಆರೋಪಗಳನ್ನು ಯೂನಿಸೆಫ್ ನಿರಾಕರಿಸಿದ್ದು, ಎಲ್ಡರ್ ಅವರನ್ನು ಶ್ರೀಲಂಕಾದಲ್ಲೇ ಉಳಿಸಿಕೊಳ್ಳುವ ಆಶಯದೊಂದಿಗೆ, ಸಂಸ್ಥೆಯ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳನ್ನು ಭೇಟಿಯಾಗಲು ನಿಗದಿಯಾಗಿದೆಯೆಂದು ಯೂನಿಸೆಫ್ ವಕ್ತಾರೆ ಸಾರಾ ಕ್ರೌವ್ ತಿಳಿಸಿದ್ದಾರೆ.
ದೇಶದ ನಾಗರಿಕ ಯುದ್ಧದಲ್ಲಿ ಸಿಕ್ಕಿಬಿದ್ದ ಮಕ್ಕಳು ಮತ್ತು ಸಂತ್ರಸ್ತರ ಶಿಬಿರದಲ್ಲಿ ಅವರ ಸ್ಥಿತಿಗತಿ ಕುರಿತು ಯೂನಿಸೆಫ್ ಕಳವಳದ ಬಗ್ಗೆ ಎಲ್ಡರ್ ಮಾಧ್ಯಮದ ಜತೆ ಆಗಾಗ್ಗೆ ಹಂಚಿಕೊಂಡಿದ್ದರೆಂದು ಕ್ರೌವ್ ತಿಳಿಸಿದರು. ಜೇಮ್ಸ್ ಅತ್ಯಂತ ದುರ್ಬಲ ಮಹಿಳೆಯರು ಮತ್ತು ಮಕ್ಕಳ ಪರ ನಿಷ್ಪಕ್ಷಪಾತ ವಾದಿ ಮತ್ತು ಧ್ವನಿಯಾಗಿದ್ದರು. ಅವರು ಈ ದೇಶದಲ್ಲೇ ಉಳಿದು ಕರ್ತವ್ಯ ನಿರ್ವಹಿಸಲು ನಾವು ಬಯಸುತ್ತೇವೆಂದು ಅವರು ನುಡಿದರು.
ಶ್ರೀಲಂಕಾ ಸೇನೆ ಮತ್ತು ಎಲ್‌ಟಿಟಿಇ ನಡುವ ಕದನದಲ್ಲಿ ನಾಲ್ಕು ತಿಂಗಳ ಮಗುವಿನಂತ ಎಳೆಯ ಮಕ್ಕಳು ಕೂಡ ಷೆಲ್ ಚೂರುಗಳು ಸಿಡಿತ ಮತ್ತಿತರ ಗಾಯಗಳಿಂದ ಆಸ್ಪತ್ರೆಗಳಿಗೆ ಸೇರಿದ್ದು, ಸಂಘರ್ಷವಲಯದಲ್ಲಿ ನಾಗರಿಕರಿಗೆ ದುಃಸ್ವಪ್ನವೆನಿಸಿದೆಯೆಂದು ಎಲ್ಡರ್ ಸಿಎನ್‌ಎನ್‌ಗೆ ಕಳೆದ ಫೆಬ್ರವರಿಯಲ್ಲಿ ತಿಳಿಸಿದ್ದರು.