ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಭಯೋತ್ಪಾದನೆ ದಾಳಿಯಲ್ಲಿ ಭಾರತದ ಕೈವಾಡವಿದೆಯೆಂದು ಶಂಕಿಸಿದ್ದ ಪಾಕಿಸ್ತಾನ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿಯು, ಈ ದಾಳಿಗೆ ಎಲ್ಟಿಟಿಯು ಆರ್ಥಿಕ ಸಹಾಯ ನೀಡಿರಬಹುದೆಂದು ಭಾನುವಾರ ಗೂಬೆ ಕೂರಿಸಿದ್ದಾರೆ .ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲೆ ದಾಳಿ ಕುರಿತಂತೆ ಮಾತನಾಡಿದ ಗಿಲಾನಿ, ಶ್ರೀಲಂಕಾದ ಗುಂಪೊಂದು ದಾಳಿಯಲ್ಲಿ ಭಾಗಿಯಾದ ಬಗ್ಗೆ ಶ್ರೀಲಂಕಾ ಅಧಿಕಾರಿಗಳು ಹೇಳಿದ್ದಾರೆಂದು ಗಿಲಾನಿ ತಿಳಿಸಿದರು.
ಲಿಬ್ಯಾಗೆ ಉಭಯತ್ರರು ಭೇಟಿ ನೀಡಿದ್ದಾಗ ಶ್ರೀಲಂಕಾ ಅಧ್ಯಕ್ಷ ಮಹೀಂದ್ರ ರಾಜಪಕ್ಷೆ ಅವರೇ ಸ್ವತಃ ಈ ವಿಷಯ ತಿಳಿಸಿದ್ದಾಗಿ ಗಿಲಾನಿ ಹೇಳಿದ್ದಾರೆ. ಶ್ರೀಲಂಕಾ ತಂಡದ ಮೇಲೆ ದಾಳಿಗೆ ಶ್ರೀಲಂಕಾದಿಂದಲೇ ಆರ್ಥಿಕ ನೆರವು ನೀಡಲಾಗಿದೆಯೆಂಬ ಬಗ್ಗೆ ತಮಗೆ ಸುಳಿವು ಸಿಕ್ಕಿರುವುದಾಗಿ ಲಿಬ್ಯಾದಲ್ಲಿ ಶ್ರೀಲಂಕಾ ಅಧ್ಯಕ್ಷರೇ ತಮಗೆ ತಿಳಿಸಿದ್ದರು.
ಈ ಸುಳಿವುಗಳನ್ನು ಹಂಚಿಕೊಳ್ಳಲು ಬಯಸುವುದಾದರೆ ಒಳಾಡಳಿತ ಸಚಿವಾಲಯದಿಂದ ನಾವು ಅಧಿಕಾರಿಗಳನ್ನು ಕಳಿಸುತ್ತೇವೆಂದು ತಾವು ಹೇಳಿದ್ದಾಗಿ ಗಿಲಾನಿ ತಿಳಿಸಿದರು. ಲಾಹೋರ್ನ ವಾಹನದಟ್ಟಣೆಯ ರಸ್ತೆಯಲ್ಲಿ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 8 ಜನರು ಸತ್ತಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.