ಮನೆಯಿಂದ ಹೊರಗೆ ಟೈಟ್ ಪ್ಯಾಂಟುಗಳನ್ನು ಧರಿಸಿದ ಪತ್ರಕರ್ತೆಗೆ ಸೂಡನ್ ನ್ಯಾಯಾಧೀಶರು ಸಾರ್ವಜನಿಕ ಅಸಭ್ಯತೆ ತಡೆ ಕಾನೂನು ಉಲ್ಲಂಘಿಸಿದ ಆರೋಪದ ಮೇಲೆ 200 ಡಾಲರ್ ದಂಡ ವಿಧಿಸಿದ್ದು,ನಿರೀಕ್ಷಿಸಿದ್ದ ಛಡಿಯೇಟಿನ ಶಿಕ್ಷೆಯಿಂದ ಮುಕ್ತಗೊಳಿಸಿದ್ದಾರೆ. ಖಾರ್ಟೋಮ್‌ನ ಜನಪ್ರಿಯ ಕೆಫೆಯಲ್ಲಿ ಪೊಲೀಸರು ದಾಳಿ ಮಾಡಿದಾಗ ಬಿಗಿಯಾದ ಪ್ಯಾಂಟ್ ಧರಿಸಿ ಅಸಭ್ಯತೆ ಪ್ರದರ್ಶಿಸಿದ್ದಾರೆಂಬ ಆರೋಪದ ಮೇಲೆ ಲುಬ್ನಾ ಹುಸೇನ್ ಸಹಿತ 13 ಮಹಿಳೆಯರನ್ನು ಬಂಧಿಸಲಾಗಿತ್ತು.
10 ಮಂದಿ ಮಹಿಳೆಯರಿಗೆ ದಂಡವಿಧಿಸಿ ಎರಡು ದಿನಗಳ ಬಳಿಕ ಛಡಿಯೇಟಿನ ಶಿಕ್ಷೆ ಜಾರಿ ಮಾಡಲಾಯಿತು. ಹುಸೇನ್ ಮತ್ತು ಇನ್ನೂ ಇಬ್ಬರು ವಿಚಾರಣೆ ಎದುರಿಸಲು ನಿರ್ಧರಿಸಿದ್ದರು. ತಾವು ಒಂದು ಪೆನ್ನಿ ದಂಡವನ್ನೂ ನೀಡುವುದಿಲ್ಲ ಎಂದು ಕೋರ್ಟ್ ಕಸ್ಟಡಿಯಲ್ಲಿದ್ದಾಗಲೇ ಅವರು ಹೇಳಿದರು. ದಂಡ ತೆರುವುದರ ಬದಲಿಗೆ ತಾವು ಜೈಲಿಗೆ ಹೋಗಲೂ ಸಿದ್ಧರೆಂದು ಹುಸೇನ್ ಶುಕ್ರವಾರ ತಿಳಿಸಿದ್ದರು.
ಸೂಡನ್ ಮತ್ತು ವಿಶ್ವಾದ್ಯಂತ ಹುಸೇನ್ ಪ್ರಕರಣ ಮುಖಪುಟದ ಸುದ್ದಿಯಾಗಿ ವಿಜೃಂಭಿಸಿತು. ಇಸ್ಲಾಂ ಸಂಪ್ರದಾಯವಾದಿ ವ್ಯಾಖ್ಯಾನಗಳ ಆಧಾರದ ಮೇಲೆ ದೇಶದ ಕಠಿಣ ನೈತಿಕ ಕಾನೂನುಗಳ ವಿರುದ್ಧ ವಿಶ್ವಾದ್ಯಂತ ಜನಾಭಿಪ್ರಾಯ ಕ್ರೋಢೀಕರಣಕ್ಕೆ ಹುಸೇನ್ ಬಯಸಿದ್ದರು.
ಲಂಡನ್ ಮೂಲದ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸೂಡನ್ ಸರ್ಕಾರಕ್ಕೆ ಕರೆ ಮಾಡಿ ಹುಸೇನ್ ವಿರುದ್ಧ ಆರೋಪಗಳನ್ನು ಹಿಂತೆಗೆದು ಅಸಮರ್ಪಕ ದಂಡವನ್ನು ಸಮರ್ಥಿಸುವ ಕಾನೂನನ್ನು ರದ್ದು ಮಾಡುವಂತೆ ಒತ್ತಾಯಿಸಿದೆ.ವಿಚಾರಣೆ ವೇಳೆಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಹುಸೇನ್, ಈ ಕಾನೂನು ಇಸ್ಲಾಂ ವಿರೋಧಿಯಾಗಿದ್ದು, ಮಹಿಳೆಯರ ಮೇಲೆ ದಬ್ಬಾಳಿಕೆಯ ಕುರುಹಾಗಿದೆ ಎಂದು ಅವರು ಬಣ್ಣಿಸಿದ್ದು, ಈ ಕಾನೂನಿನ ವಿರುದ್ಧ ಹೋರಾಟ ಮಾಡಲು ಅಂತಾರಾಷ್ಟ್ರೀಯ ಗಮನ ಸೆಳೆಯುವುದಾಗಿ ಹೇಳಿದ್ದರು.