ಇಸ್ಲಾಮಾಬಾದ್, ಸೋಮವಾರ, 7 ಸೆಪ್ಟೆಂಬರ್ 2009( 20:36 IST )
ಮುಂಬೈ ದಾಳಿಗಳ ಬಗ್ಗೆ ತನಿಖೆಯನ್ನು ಪಾಕಿಸ್ತಾನ ಉದ್ದೇಶಪೂರ್ವಕವಾಗಿ ಕುಂಠಿತಗೊಳಿಸಿರುವ ನಡುವೆ, ಭಾರತವು ನಮ್ಮ ಪ್ರಾಮಾಣಿಕತೆ ಕುರಿತು ಆರೋಪ ಮಾಡುವ ಬದಲಿಗೆ ದೃಢ ಸಾಕ್ಷ್ಯಾಧಾರ ನೀಡಿ ತನಿಖೆಯಲ್ಲಿ ನೆರವಾಗಬೇಕು ಎಂದು ಪಾಕಿಸ್ತಾನ ಹೇಳಿದೆ.
ಈ ಪ್ರಕರಣ ನಿಭಾಯಿಸುವುದರಲ್ಲಿ ನಮ್ಮ ಪ್ರಾಮಾಣಿಕತೆ ಕುರಿತು ಸಂಶಯ ಪಡುವ ಬದಲಿಗೆ,ಈ ಪ್ರಕರಣವನ್ನು ಅರ್ಥಪೂರ್ಣವಾಗಿ ಮುಂದೆ ಒಯ್ಯಲು ದೃಢ ಸಾಕ್ಷ್ಯಗಳನ್ನು ಒದಗಿಸಬೇಕು ಎಂದು ವಿದೇಶಾಂಗ ಕಚೇರಿ ವಕ್ತಾರ ಅಬ್ದುಲ್ ಬಸಿತ್ ತಿಳಿಸಿದ್ದಾರೆ. ಭಾರತ ಮುಂಬೈ ದಾಳಿ ಕುರಿತು ಒದಗಿಸಿದ ಕಡತಗಳ ಬಗ್ಗೆ ಪಾಕ್ ನ್ಯಾಯಾಂಗ ನಿರ್ಧರಿಸುತ್ತದೆ. ಇದೊಂದು ಅಪ್ಪಟ ನ್ಯಾಯಾಂಗಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಪಾಕ್ ಮತ್ತು ಭಾರತ ಸರ್ಕಾರಗಳು ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಬಿಬಿಸಿಗೆ ಹೇಳಿದ್ದಾರೆ.
ಭಾರತ ಒದಗಿಸಿದ ದಾಖಲೆಗಳ ಬಗ್ಗೆ ಕೋರ್ಟ್ ಮಾತ್ರ ನಿರ್ಧಾರ ಕೈಗೊಳ್ಳಲು ಸಾಧ್ಯವೆಂದು ಹೇಳಿದ ಅವರು, ದಾಳಿಗೆ ಸಂಬಂಧಿಸಿದಂತೆ ಐವರು ಶಂಕಿತರ ವಿರುದ್ಧ ಕೋರ್ಟ್ ಕಾನೂನಿನ ಕ್ರಮಗಳು ಆರಂಭವಾಗಿದೆಯೆಂದು ಬಸೀತ್ ಹೇಳಿದರು.
ಲಷ್ಕರೆ ತೊಯ್ಬಾ ಸಂಸ್ಥಾಪಕ ಹಫೀಝ್ ಸಯೀದ್ ವಿರುದ್ಧ ಕ್ರಮ ಜರುಗಿಸಲು ಪಾಕಿಸ್ತಾನ ಹಿಂದೇಟು ಹಾಕುತ್ತಿದೆಯೆಂದು ಗೃಹಸಚಿವ ಚಿದಂಬರಂ ಪ್ರತಿಕ್ರಿಯೆಗೆ ಉತ್ತರಿಸಿದ ಬಸೀತ್, ಶರ್ಮ್ ಎಲ್ ಶೇಖ್‌ನಲ್ಲಿ ಪಾಕಿಸ್ತಾನ ಮತ್ತು ಭಾರತದ ಪ್ರಧಾನಮಂತ್ರಿಗಳು ನೀಡಿದ ಜಂಟಿ ಹೇಳಿಕೆಯ ಆಶಯಕ್ಕೆ ಈ ಪ್ರತಿಕ್ರಿಯೆ ವಿರುದ್ಧವಾಗಿದೆಯೆಂದು ಅವರು ಹೇಳಿದರು. ಲಷ್ಕರೆ ತೊಯ್ಬಾ ಮೇಲೆ ಮುಂಬೈ ದಾಳಿಯ ಆರೋಪ ಹೊರಿಸಿದ ಭಾರತ ಪಾಕಿಸ್ತಾನದ ಜತೆ ಜಂಟಿ ಮಾತುಕತೆ ಸ್ಥಗಿತಗೊಳಿಸಿದೆ.