ವಾಯವ್ಯ ಪಾಕಿಸ್ತಾನದಲ್ಲಿ ಮಂಗಳವಾರ ಶಾಲೆಗೆ ತೆರಳುತ್ತಿದ್ದ ಪ್ರೌಢಶಾಲೆ ವಿದ್ಯಾರ್ಥಿಗಳ ಗುಂಪಿನ ಮೇಲೆ ತಾಲಿಬಾನ್ ಉಗ್ರಗಾಮಿಗಳು ದಾಳಿ ಮಾಡಿದ್ದರಿಂದ ನಾಲ್ಕು ಮಂದಿ ಶಾಲಾ ವಿದ್ಯಾರ್ಥಿಗಳು ಹತರಾಗಿದ್ದು, ಮೂವರು ಗಾಯಗೊಂಡಿದ್ದಾರೆಂದು ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಶಿಯಾ ಮುಸ್ಲಿಂ ಜನಾಂಗಕ್ಕೆ ಸೇರಿದವರಾಗಿದ್ದರಿಂದ ಅವರ ಮೇಲೆ ದಾಳಿ ಮಾಡಿರುವುದು ಸ್ಪಷ್ಟಪಟ್ಟಿದೆ.
ತಾಲಿಬಾನ್ ಉಗ್ರಗಾಮಿಗಳು ಬಹುಸಂಖ್ಯಾತ ಸುನ್ನಿ ಸಮುದಾಯಕ್ಕೆ ಸೇರಿದವರಾಗಿದ್ದು, ಸರ್ಕಾರದ ವಿರುದ್ಧ ಹೋರಾಡುವ ಕಾರ್ಯತಂತ್ರವಾಗಿ ಶಿಯಾಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಅವರು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡುತ್ತಿದ್ದು, ನಾಲ್ವರು ಸತ್ತಿರುವ ಬಗ್ಗೆ ವರದಿಯಾಗಿದೆಯೆಂದು ಒರ್ಕಾಜಾಯ್ ಜನಾಂಗೀಯ ಪಸ್ತೂನ್ ಬುಡಕಟ್ಟು ಪ್ರದೇಶದ ಆಡಳಿತಾಧಿಕಾರಿ ತಿಳಿಸಿದ್ದಾರೆ.
ಬುಡಕಟ್ಟು ಜನರು ಪ್ರತಿದಾಳಿ ಮಾಡಿದ್ದು, ಉಭಯ ಕಡೆಗಳು ಹೋರಾಟಕ್ಕಿಳಿದಿವೆ ಎಂದು ಕಲಾಯ ಪಟ್ಟಣದ ನಿವಾಸಿಗಳು ಹೇಳಿದ್ದಾರೆ. ಪಾಕಿಸ್ತಾನ ಭದ್ರತಾ ಪಡೆಗಳು ತಾಲಿಬಾನ್ ವಿರುದ್ಧ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದು, ಪಾಕಿಸ್ತಾನ ತಾಲಿಬಾನ್ ಮುಖ್ಯಸ್ಥ ಬೈತುಲ್ಲಾ ಮೆಹ್ಸೂದ್ ಕಳೆದ ತಿಂಗಳು ಅಮೆರಿಕ ಕ್ಷಿಪಣಿ ದಾಳಿಯಲ್ಲಿ ಹತನಾಗಿದ್ದ.