ಪಾಕಿಸ್ತಾನದ ಸೇನಾಮುಖ್ಯಕಚೇರಿ ಮೇಲೆ ದಾಳಿ ಮಾಡಿದ ಕೆಲವೇ ದಿನಗಳಲ್ಲಿ ಉಗ್ರಗಾಮಿಗಳು ಗುರುವಾರ ಲಾಹೋರ್‌ನಲ್ಲಿ ತಮ್ಮ ಅಟಾಟೋಪ ಮೆರೆದಿದ್ದು, ನಗರದ ನಾಲ್ಕು ಸ್ಥಳಗಳಲ್ಲಿ ರಕ್ಷಣಾ ಪಡೆಗಳನ್ನೇ ಗುರಿಯಾಗಿರಿಸಿ ದಾಳಿ ಮಾಡುವ ಮೂಲಕ ಭಯೋತ್ಪಾದನೆಯ ಕರಾಳಹಸ್ತ ಚಾಚಿದ್ದಾರೆ. ಈ ದಾಳಿಗಳಲ್ಲಿ ಕನಿಷ್ಠ ಇಬ್ಬರು ಶಾಲಾ ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಕನಿಷ್ಠ 42 ಮಂದಿ ಗುಂಡಿನ ದಾಳಿ ಮತ್ತು ಗ್ರೆನೇಡ್ ಸ್ಫೋಟಗಳಿಗೆ ಬಲಿಯಾಗಿದ್ದಾರೆ.
ಮನವಾನ್ ಪೊಲೀಸ್ ತರಬೇತಿ ಶಾಲೆ, ಫೆಡರಲ್ ತನಿಖಾ ದಳ ಕಟ್ಟಡ ಮತ್ತು ಎಲೈಟ್ ಪಡೆ ಮುಖ್ಯಕೇಂದ್ರಗಳಲ್ಲಿ ಹಾಗೂ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ಕಟ್ಟಡಗಳಲ್ಲಿ ಭಯೋತ್ಪಾದಕರು ದಾಳಿ ಮಾಡಿದ್ದು, ಪೊಲೀಸರು ಮತ್ತು ಉಗ್ರರ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯುತ್ತಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಎಫ್‌ಐಎ ಕಟ್ಟಡದ ಮೇಲೆ ದಾಳಿ ಬಳಿಕ ಒಟ್ಟು 7 ಶವಗಳು ಪತ್ತೆಯಾಗಿವೆ.
ಲಾಹೋರ್ ಟೆಂಪಲ್ ರಸ್ತೆಗೆ ಪೊಲೀಸರು ತಡೆವಿಧಿಸಿದ್ದು, ಎಫ್‌ಐಎ ಕಟ್ಟಡದೊಳಕ್ಕೆ ನುಗ್ಗಿರುವ ಐವರು ದಾಳಿಕೋರರು ಒಂದೇ ಸಮನೇ ಗುಂಡಿನ ದಾಳಿ ನಡೆಸಿದ್ದಾರೆಂದು ತಿಳಿಸಿದ್ದಾರೆ. ಎಫ್‌ಐಎ ಕಟ್ಟಡದೊಳಕ್ಕೆ ಇಬ್ಬರು ಒತ್ತೆಯಾಳುಗಳನ್ನು ಇಬ್ಬರು ಬಂದೂಕುಧಾರಿಗಳು ಒತ್ತೆಯಿರಿಸಿದ್ದಾರೆ. ಭಯೋತ್ಪಾದಕರ ಜತೆ ಕಾಳಗ ನಡೆಸುತ್ತಿರುವ ಪೊಲೀಸರು ಎಫ್‌ಐಎ ಕಟ್ಟಡದಲ್ಲಿ 7 ಮಂದಿಯ ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ.
ಆದರೆ ದೇಹಗಳು ಭಯೋತ್ಪಾದಕರದ್ದೇ ಅಥವಾ ಕಟ್ಟಡದಲ್ಲಿ ಉಪಸ್ಥಿತರಿದ್ದ ವ್ಯಕ್ತಿಗಳದ್ದೇ ಎನ್ನುವುದು ತಿಳಿದುಬಂದಿಲ್ಲ. ಒಬ್ಬ ಪೊಲೀಸ್ ಕೂಡ ಚಕಮಕಿಯಲ್ಲಿ ಹತನಾಗಿದ್ದಾನೆ.ಎಫ್‌ಐಎ ಕಟ್ಟಡದ ಮೇಲೆ ದಾಳಿ ಮಾಡಿದ ಬಳಿಕ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆಂದು ಪಂಜಾಬ್ ಪ್ರಾಂತ್ಯ ಗೃಹಕಾರ್ಯದರ್ಶಿ ನದೀಂ ಹಸನ್ ಅಸೀಫ್ ತಿಳಿಸಿದ್ದಾರೆ.
ಏತನ್ಮಧ್ಯೆ ವಾಯವ್ಯ ಪಾಕಿಸ್ತಾನದ ಪಟ್ಟಣ ಕೊಹಾಟ್‌ನಲ್ಲಿ ಪೊಲೀಸ್ ಠಾಣೆ ಹೊರಗೆ ಸ್ಫೋಟಕಗಳನ್ನು ಆತ್ಮಾಹುತಿ ಕಾರ್ ಬಾಂಬರ್ ಸಿಡಿಸಿದ್ದರಿಂದ 10 ಜನರು ಸತ್ತಿದ್ದು, ಅವರಲ್ಲಿ ಶಾಲಾ ಮಕ್ಕಳು ಕೂಡ ಸೇರಿದ್ದಾರೆಂದು ಸ್ಥಳದಲ್ಲಿದ್ದ ಪೊಲೀಸನೊಬ್ಬ ತಿಳಿಸಿದ್ದಾನೆ.