ಲಾಹೋರ್‌ನಲ್ಲಿ ಮೂರು ಭದ್ರತಾ ಸಂಸ್ಥೆಗಳ ಮೇಲೆ ನಡೆದ ಭೀಕರ ದಾಳಿಗಳ ಹೊಣೆಯನ್ನು ತಾಲಿಬಾನ್ ಉಗ್ರಗಾಮಿಗಳು ಹೊತ್ತಿದ್ದಾರೆ. ಮಹಿಳೆಯೊಬ್ಬಳು ಸೇರಿದಂತೆ ಉಗ್ರಗಾಮಿಗಳು ಫೆಡರಲ್ ತನಿಖಾ ದಳದ ಕಚೇರಿ ಮತ್ತು ಎರಡು ಪೊಲೀಸ್ ತರಬೇತಿ ಘಟಕಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸುವ ಮೂಲಕ ಅಟ್ಟಹಾಸ ಮೆರೆದಿದ್ದಾರೆ.
ಈ ದಾಳಿಗಳಲ್ಲಿ ಸತ್ತವರ ಸಂಖ್ಯೆ 42ಕ್ಕೇರಿದೆಯೆಂದು ವರದಿಗಳು ತಿಳಿಸಿವೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 9.15ಕ್ಕೆ ಭಯೋತ್ಪಾದಕರು ದಾಳಿ ನಡೆಸಿ ರಕ್ತದ ಕೋಡಿ ಹರಿಸಿದರು. ದಾಳಿಯಲ್ಲಿ ಐವರು ಭಯೋತ್ಪಾದಕರು ಅಸುನೀಗಿದ್ದು, ಉಳಿದವರು ಭದ್ರತಾಸಿಬ್ಬಂದಿ ಮತ್ತು ನಾಗರಿಕರು. ಎಫ್‌ಐಎ ಕಚೇರಿಯಲ್ಲಿ ಭಯೋತ್ಪಾದಕರು ಮೂರು ಗುಂಪುಗಳಲ್ಲಿ ಆಕ್ರಮಣ ಮಾಡಿ, ಭದ್ರತಾ ಪಡೆಗಳ ಜತೆ ಭಾರೀ ಗುಂಡಿನ ಚಕಮಕಿ ನಡೆಸಿದರೆಂದು ವರದಿಯಾಗಿದೆ.
ಎಫ್‌ಐಎ ಕಚೇರಿ ಮತ್ತು ಮನಾವನ್ ಪೊಲೀಸ್ ತರಬೇತಿ ಕೇಂದ್ರದ ಮೇಲೆ ದಾಳಿಗಳನ್ನು ಭದ್ರತಾ ಪಡೆಗಳು ಯಶಸ್ವಿಯಾಗಿ ಎದುರಿಸಿದ್ದು, ಭಯೋತ್ಪಾದಕರಿಂದ ಈ ಕಚೇರಿಗಳನ್ನು ಮುಕ್ತಗೊಳಿಸಲಾಗಿದೆ.ಆದಾಗ್ಯೂ, ಬೆಡಿಯಾನ್ ರಸ್ತೆಯ ಎಲೈಟ್ ತರಬೇತಿ ಕೇಂದ್ರದಲ್ಲಿ ಭಯೋತ್ಪಾದಕರು ಕೆಲವು ಭದ್ರತಾಸಿಬ್ಬಂದಿಯನ್ನು ಒತ್ತೆಇರಿಸಿಕೊಂಡಿದ್ದಾರೆಂದು ಟಿವಿ ಸುದ್ದಿ ಚಾನೆಲ್‌ಗಳು ವರದಿ ಮಾಡಿವೆ.
ವಾಯವ್ಯ ಪ್ರಾಂತ್ಯದಲ್ಲಿ ಪಾಕಿಸ್ತಾನ ಸೇನೆ ತಾಲಿಬಾನ್ ವಿರುದ್ಧ ಕಾರ್ಯಾಚರಣೆ ಕೈಗೊಂಡ ಬಳಿಕ ಭಯೋತ್ಪಾದನೆ ದಾಳಿಗಳು ದಿಢೀರ್ ಉಲ್ಬಣಿಸಿವೆ. ತಾಲಿಬಾನ್ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದರೆ, ಪರಿಸ್ಥಿತಿ ಮತ್ತಷ್ಟು ಕೆಡಬಹುದು ಎಂದು ತಾಲಿಬಾನ್ ಈ ಮೂಲಕ ಸಂದೇಶ ನೀಡಿದೆ. ಕಳೆದ ಆಗಸ್ಟ್‌ನಲ್ಲಿ ಅಮೆರಿಕ ಡ್ರೋನ್ ದಾಳಿಯಲ್ಲಿ ತಮ್ಮ ಅಧಿನಾಯಕ ಬೈತುಲ್ಲಾ ಮೆಹ್ಸೂದ್ ಹತ್ಯೆ ಬಳಿಕ ಉಗ್ರಗಾಮಿಗಳು ತಕ್ಷಣವೇ ಪುನರ್‌ಸಂಘಟನೆಯಾಗಿರುವ ಭಾವನೆ ಇದರಿಂದ ಉದ್ಭವಿಸಿದೆ.
ಕಳೆದ ಶನಿವಾರ ಸೇನಾ ಸಮವಸ್ತ್ರ ಧರಿಸಿದ್ದ ತಾಲಿಬಾನ್ ಬಂದೂಕುಧಾರಿಗಳು ರಾವಲ್ಪಿಂಡಿಯ ಪಾಕಿಸ್ತಾನ ಮುಖ್ಯಕೇಂದ್ರದ ಮೇಲೆ ದಾಳಿ ನಡೆಸಿದ ಬಳಿಕ ಸಂಭವಿಸಿದ ಗುಂಡಿನ ಕಾಳಗದಲ್ಲಿ 6 ಸೈನಿಕರು ಮತ್ತು ನಾಲ್ವರು ಉಗ್ರರು ಹತರಾಗಿದ್ದರು. ಈ ದಾಳಿಯ ಬೆನ್ನಿಗೇ ಮತ್ತೆ ತಾಲಿಬಾನ್‌ಗಳು ಸರಣಿ ದಾಳಿಗಳನ್ನು ನಡೆಸಿದ ಅಟ್ಟಹಾಸ ಮೆರೆದಿದ್ದಾರೆ. ತಾಲಿಬಾನಿಗಳನ್ನು ನಿರ್ಮೂಲನೆ ಮಾಡಲು ಸೇನೆ ದೃಢಸಂಕಲ್ಪದಿಂದ ಕಾರ್ಯಾಚರಣೆ ನಡೆಸುತ್ತಿದ್ದರೂ ಪುನರ್‌ಸಂಘಟಿತರಾಗಿ ತಾಲಿಬಾನಿಗಳು ಮೇಲಿಂದ ಮೇಲೆ ದಾಳಿ ನಡೆಯುತ್ತಿರುವುದು ಪಾಕಿಸ್ತಾನವನ್ನು ತಲ್ಲಣಗೊಳಿಸಿದೆ.