ಇಸ್ಲಾಮಾಬಾದ್, ಗುರುವಾರ, 15 ಅಕ್ಟೋಬರ್ 2009( 15:40 IST )
ಪಾಕಿಸ್ತಾನ ತಮ್ಮ ಕೈವಶವಾದರೆ ಅದರ ನೆರವಿನಿಂದ ಭಾರತದಲ್ಲಿ ರಕ್ತಪಾತ ಹರಿಸುವುದಾಗಿ ಉಗ್ರಗಾಮಿ ಸಂಘಟನೆ ತಾಲಿಬಾನ್‌ನ ಹೊಸ ನಾಯಕ ಹಕೀಮುಲ್ಲಾ ಮೆಹ್ಸೂದ್ ಗುರುವಾರ ಎಚ್ಚರಿಸಿದ್ದಾನೆ. ಪಾಕಿಸ್ತಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಇಸ್ಲಾಮಿಕ್ ದೇಶ ಮಾಡುವುದಾಗಿ ಹಕೀಮುಲ್ಲಾ ಹೇಳಿದ್ದಾನೆ.
ಪಾಕಿಸ್ತಾನದ ರಾವಲ್ಪಿಂಡಿಯ ಸೇನಾ ಮುಖ್ಯಕಚೇರಿ ಮೇಲೆ ತಾಲಿಬಾನ್ ದಾಳಿ ಮಾಡಿದ ಬೆನ್ನಿಗೇ ಪಾಕ್‌ನ ಮೂರು ಭದ್ರತಾ ಕಚೇರಿಗಳ ಮೇಲೆ ದಾಳಿ ನಡೆಸಿ ರಕ್ತದ ಕೋಡಿ ಹರಿಸಿದ ಸಂದರ್ಭದಲ್ಲೇ ಹಕೀಮುಲ್ಲಾ ಎಚ್ಚರಿಕೆ ನೀಡಿರುವುದು ಭಾರತ ತಾಲಿಬಾನಿಗಳಿಂದ ಎದುರಿಸುತ್ತಿರುವ ಭೀತಿಗೆ ಸಾಕ್ಷಿಯಾಗಿದೆ.
ಪಾಕಿಸ್ತಾನವು ಅಣ್ವಸ್ತ್ರಸಜ್ಜಿತವಾಗಿದ್ದು, ತಾಲಿಬಾನಿಗಳ ಕೈಗೆ ಅಣ್ವಸ್ತ್ರ ಸಿಕ್ಕಿದರೆ ಎಂತಹ ಅನಾಹುತಕ್ಕೆ ಎಡೆಯಾಗಬಹುದೆಂಬ ಭೀತಿ ಈ ನಡುವೆ ಆವರಿಸಿದೆ. ಈ ಕುರಿತು ಅಮೆರಿಕದ ಉನ್ನತಾಧಿಕಾರಿಗಳು ಸಹ ಅನೇಕ ಬಾರಿ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಅಣ್ವಸ್ತ್ರಾಗಾರಗಳಿಗೆ ಸೂಕ್ತ ಭದ್ರತೆ ಕಲ್ಪಿಸಲಾಗಿದ್ದು, ಭಯೋತ್ಪಾದಕರ ಕೈಗೆ ಸಿಗುವ ಸಂಭವನೀಯತೆಯನ್ನು ಪಾಕ್ ತಳ್ಳಿಹಾಕಿದೆ.