ವಾಷಿಂಗ್ಟನ್, ಗುರುವಾರ, 15 ಅಕ್ಟೋಬರ್ 2009( 18:23 IST )
ಕತ್ತಲಿನ ವಿರುದ್ಧ ಬೆಳಕಿನ ಜಯದ ಸಂಕೇತವಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಶ್ವೇತಭವನದಲ್ಲಿ ದೀಪಾವಳಿಯ ದೀಪ ಬೆಳಗಿಸಿ ಸಂಭ್ರಮಿಸಿದರು. 2003ರಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಬುಷ್ ಆಡಳಿತದಲ್ಲಿ ನಾಂದಿ ಹಾಡಿದರೂ, ವೈಯಕ್ತಿಕವಾಗಿ ದೀಪಾವಳಿ ಸಮಾರಂಭದಲ್ಲಿ ಹಾಜರಾಗಿದ್ದ ಪ್ರಥಮ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಒಬಾಮಾ ಪಾತ್ರರಾದರು.
ಹಿಂದಿ ಅ-ಕಪೆಲಾ ಸಮೂಹ ಪೆನ್ ಮಸಾಲಾದ ಪ್ರದರ್ಶನದೊಂದಿಗೆ ಆರಂಭವಾದ ಸಮಾರಂಭ ಸ್ಥಳೀಯ ಶಿವ-ವಿಷ್ಣು ದೇವಸ್ಥಾನದ ಅರ್ಚಕರೊಬ್ಬರ ಸಂಸ್ಕೃತ ಮಂತ್ರಘೋಷಗಳಿಂದ ಅಂತ್ಯಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಒಬಾಮಾ, ಮುಂಬರುವ ಶನಿವಾರ, ಹಿಂದುಗಳು, ಜೈನರು, ಸಿಖ್ಖರು ಮತ್ತು ಬೌದ್ಧರು ಅಮೆರಿಕ ಹಾಗೂ ಜಗತ್ತಿನಾದ್ಯಂತ ದೀಪಗಳನ್ನು ಬೆಳಗಿಸುವ ಮೂಲಕ, ಕತ್ತಲಿನ ವಿರುದ್ಧ ಬೆಳಕಿನ ಜಯ ಸಂಕೇತಿಸುವ, ಅಜ್ಞಾನದ ವಿರುದ್ಧ ಜ್ಞಾನವನ್ನು ಸಂಕೇತಿಸುವ ಹಬ್ಬವನ್ನು ಆಚರಿಸುತ್ತಾರೆಂದು ಹೇಳಿದರು.
ಇದೊಂದು ಸಂಭ್ರಮಿಸುವ ಸಂದರ್ಭವಾದರೂ, ಅದೃಷ್ಟಹೀನರನ್ನೂ ನಾವು ನೆನಪಿಸಿ ದುರ್ಬಲರನ್ನು ತಲುಪುವ ನಮ್ಮ ಬದ್ಧತೆಯನ್ನು ನವೀಕರಿಸಬೇಕು ಎಂದು ಅವರು ಹೇಳಿದರು.ಅರ್ಧಗಂಟೆ ಕಾಲ ನಡೆದ ಈಸ್ಟ್ ರೂಂ ಆಚರಣೆಯನ್ನು ಏಷ್ಯನ್ನರು, ಅಮೆರಿಕನ್ನರು ಮತ್ತು ಭಾರತೀಯರ ಮಿಶ್ರಿತ ಗುಂಪು ಭಾಗವಹಿಸಿತ್ತು.ವಾಣಿಜ್ಯಸಚಿವ ಆನಂದ್ ಶರ್ಮಾ ಮತ್ತು ರಾಯಭಾರಿ ಮೀರಾ ಶಂಕರ್ ಹಾಗೂ ಅನೇಕ ಭಾರತೀಯ ಅಮೆರಿಕನ್ನರು ವಾಷಿಂಗ್ಟನ್ನಿನಲ್ಲಿ ಹಾಜರಿದ್ದರು.
ಒಬಾಮಾ ಮೇಣದಬತ್ತಿಯಲ್ಲಿ ಒಂದು ದೀಪವನ್ನು ಬೆಳಗಿಸುತ್ತಿದ್ದಂತೆ ಹಣೆಯ ಮೇಲೆ ತಿಲಕ, ಧಾರ್ಮಿಕ ವಿಧಿಬದ್ಧ ಉಡುಪು ಧರಿಸಿದ್ದ ಅರ್ಚಕರು 'ಅಸತೋಮಾ ಸದ್ಗಮಯ' ಶ್ಲೋಕವನ್ನು ಪಠಣ ಮಾಡಿದರು. ಹ್ಯಾಪಿ ದಿವಾಳಿ, ಸಾಲ್ ಮುಬಾರಕ್ ಎಂದು ಶುಭಾಶಯ ಹೇಳಿದ ಒಬಾಮಾ 'ಓಂ ಶಾಂತಿ ಶಾಂತಿ'ಯೊಂದಿಗೆ ಅರ್ಚಕರು ಶ್ಲೋಕಪಠಣ ನಿಲ್ಲಿಸುವಾಗ ತದೇಕಚಿತ್ತರಾಗಿ ಆಲಿಸುತ್ತಿದ್ದರು.